Wednesday, December 15, 2010

ನಾ ಕಂಡ ನರಕಾಸುರ

ಮಾವನ ಮನೆಯಲ್ಲಿ ದೀಪಾವಳಿ ಹಬ್ಬ ಮುಗಿಸಿ ಇನ್ನೇನು ಮನೆಗೆ ಹೊರಡಬೇಕು ಎಂದು ಗಂಟು ಕಟ್ಟುತ್ತಿರುವಾಗ ಅಲ್ಲಿಗೆ ಬಂದ ಸಂಭಂಧಿಕರೊಬ್ಬರು ಇವತ್ತು ಸಂಜೆ ’ಹಂಸಗಾರು ದೇವಸ್ಥಾನದಲ್ಲಿ’ ಒಳ್ಳೇ ಆಟ ಇದ್ದು ಅಂತ ವಿವರ ಹೇಳಿದಾಗ ಕಿವಿ ನೆಟ್ಟಗಾಯಿತು. ಊರು ಕಡೆ ಆಟ ನೋಡದೇ ಸುಮಾರು ೪-೫ ವರ್ಷಗಳೇ ಕಳೆದಿತ್ತು. ನನ್ನ ಸಣ್ಣ ಮಾವನವರು ’ಏ ಇವತ್ತು ಆಟ ನೋಡ್ಕ್ಯಂಡ್ ನಾಳೆ ಬೆಳಿಗೆ ಮನೆಗೆ ಹೋಗಲಕ್ಕ’ ಅಂದಾಗ ನನಗೇ ಖುಶಿಯೇ ಆದದ್ದು. ಸರಿ ಹೇಗೂ ವ್ಯಾನ್ ಇದ್ದುದ್ದರಿಂದ ಆಟದಲ್ಲಿ ಆಸಕ್ತಿಯಿಲ್ಲದ ಒಬ್ಬರನ್ನು ಮನೆ ಕಾವಲಿಗೆ ಬಿಟ್ಟು ಮನೆಯವರೆಲ್ಲರೂ ಹೊರಟೆವು. ಅಲ್ಲಿ ಒಬ್ಬರ ಮನೆಯಲ್ಲಿ ಸಮಾರಾಧನೆಯೂ ಆಯಿತು.

ಆಟ ಶುರುವಾಗುತ್ತದೆ ಎನ್ನುವಷ್ಟರಲ್ಲಿ ನಾವಲ್ಲಿ ಬಂದು ತಲುಪಿದ್ದೆವು. ಹೊಸ್ತೋಟ ಭಾಗವತರು ಪ್ರಸಂಗದ ಬಗ್ಗೆ ವಿವರಿಸುತ್ತಿದ್ದರು.ಅವರೇ ಬರೆದ ಭೌಮಾಸುರ ಕಾಳಗ ಪ್ರಸಂಗವದು. ಭೌಮಾಸುರನೇ ನರಕಾಸುರ ಎಂದು ಎಳೆ ಎಳೆಯಾಗಿ ವಿವರಿಸಿದರು.

ಹಿಮ್ಮೇಳದವರು ಗಣಪತಿ ಸ್ತುತಿಯಿಂದ ಆರಂಬಿಸಿದರೆ ಮುಂದೆ ೨ ಚಿಕ್ಕ ಮಕ್ಕಳು ಬಾಲಗೋಪಾಲ ವೇಶವನ್ನು ನಿರ್ವಹಿಸಿದರು.
ಆರಂಭದಲ್ಲಿ ತೆರೆಕುಣಿತದೊಂದಿಗೆ ದೇವೇಂದ್ರನ ಪ್ರವೇಶವಾಯಿತು. ಹಾರಾಡಿ/ಮಟ್ಪಾಡಿ ತಿಟ್ಟಿನ ಗಂಭೀರ ಕುಣಿತ, ಗತ್ತುಗಾರಿಕೆಯ ಮಾತಿನೊಂದಿಗೆ ದೇವೇಂದ್ರನ ಪಾತ್ರಧಾರಿ ಗಮನ ಸೆಳೆದರು.ಯಾವ ಸಂದರ್ಭದಲ್ಲಿಯೂ ಅವರ ಕುಣಿತ ಹಾಗೂ ಮಾತುಗಾರಿಕೆ ಹದ ಮೀರದೆ ಹಿತವನ್ನುಂಟು ಮಾಡಿತು. ಪ್ರಸಂಗದ ಆರಂಭದಿಂದ ಅಂತ್ಯದವರೆಗೂ ಈ ಪಾತ್ರಕ್ಕೆ ಅವಕಾಶವಿತ್ತು.

ನಂತರದ ಪಾತ್ರ ನರಕಾಸುರ. ದೈತ್ಯ ಪಾತ್ರಕ್ಕೆ ಒಪ್ಪುವಂತಹ ಮೈಕಟ್ಟು, ಹೆಜ್ಜೆ ಹಾಗು ಗಟ್ಟಿತನದ ಮಾತುಗಾರಿಕೆಯಿಂದ ಪ್ರವೇಶದಿಂದ ಕೊನೆಯವರೆಗೂ ಸೂಜಿಗಲ್ಲಿನಂತೆ ಮನಸೆಳೆದ ಪಾತ್ರ. ಮುಖವರ್ಣಿಕೆ ಹಾಗೂ ಪಾತ್ರಪೋಷಣೆಯಿಂದ ಇತ್ತೀಚಿನ ದಿನಗಳಲ್ಲಿ ಉತ್ತಮ ಹೆಸರು ಮಾಡುತ್ತಿರುವ ಈ ಕಲಾವಿದ ಆ ದಿನ ಕೂಡಾ ಅದೇ ಭರವಸೆಯನ್ನು ಮೂಡಿಸುವಲ್ಲಿ ಸಫಲರಾದರು.
ಕೃಷ್ಣನ ಪಾತ್ರಧಾರಿಯು ಪ್ರವೇಶವೇ ವಿಶೇಷತೆಯಿಂದ ಕೂಡಿತ್ತು. ಭಾಗವತರು ಆ ಸಂಧರ್ಭಕ್ಕೆಂದೇ ಬರೆದ ಪದ್ಯಕ್ಕೆ ಅವರ ಅಭಿನಯ ಯಾವ ವೃತ್ತಿಪರ ಕಲಾವಿದನನ್ನೂ ಮೀರಿಸುವಂತಿತ್ತು. ಖಚಿತವಾದ ಲಯ, ಬೇಕಾದಷ್ಟೇ ಕುಣಿತ, ಅರ್ಥಗರ್ಭಿತ ಅಭಿನಯ, ಹಿತಮಿತವಾದ ಮಾತುಗಾರಿಕೆಯಿಂದ ತಮ್ಮ ಮೇಲಿನ ಭರವಸೆಯನ್ನು ಹುಸಿಗೊಳಿಸಲಿಲ್ಲ.
ಆ ದಿನ ಸತ್ಯಭಾಮೆಯ ಪಾತ್ರ ಎಲ್ಲರನ್ನೂ ಮೀರಿಸಿದಂತಹದ್ದು. ಬಹುಷಃ ಅಂತ ಪಾತ್ರಪೋಷಣೆಯನ್ನು ಇತ್ತೀಚಿನ ದಿನಗಳಲ್ಲಿ ನಾನು ಕಂಡಿದ್ದೇ ಇಲ್ಲ. ಇಲ್ಲಿ ಎಷ್ಟು ಬರೆದರೂ ಕಡಿಮೆಯೇ.
ದೇವೇಂದ್ರ ಮತ್ತು ನರಕಾಸುರನ ಬಲಗಳ ಪಾತ್ರ ಮಾಡಿದವರು ಕೂಡಾ ಗಮನ ಸೆಳೆಯುವಂತೆ ಮಾಡಿದ್ದು ಆವತ್ತಿನ ವಿಶೇಷ.

ಹಿಮ್ಮೇಳದ ಇಬ್ಬರಂತೂ ಅತ್ಯಂತ ನುರಿತ ಕಲಾವಿದರಾಗಿದ್ದರಿಂದ ಎಲ್ಲೂ ಗೊಂದಲಕ್ಕೆ ಆಸ್ಪದವಾಗಲಿಲ್ಲ.
ಭಾಗವತರು ಉತ್ತಮವಾಗಿಯೇ ಹಾಡಿದರಾದರೂ ಅವರ ಸಾಮರ್ಥ್ಯಕ್ಕೆ ತಕ್ಕುದಾಗಿ ಹಾಡಲಿಲ್ಲ. ಸ್ವಲ್ಪ ಉದಾಸೀನತೆ ಭಾಗವತಿಕೆಯಲ್ಲಿ ಎದ್ದು ಕಾಣುತ್ತಿದ್ದಂತ ದೃಶ್ಯ. ಗುರುವಿನಿಂದ ಬಂದ ಬಳುವಳಿಯೇ ಇರಬಹುದು ಎಂದುಕೊಂಡೆ.

ಬೇರೆ ಬೇರೆ ಹವ್ಯಾಸಿ ಕಲಾವಿದರು ಸಮರ್ಥ ನಿರ್ದೇಶನದಲ್ಲಿ ಒಂದು ಉತ್ತಮ ಕಥಾಭಾಗವನ್ನು ಹೇಗೆ ಒಪ್ಪಿಸಬಹುದು ಎಂಬುದಕ್ಕೆ ಜ್ವಲಂತ ಉದಾಹರಣೆ ಈ ಪ್ರಯೋಗ. ಸುಮಾರು ಮೂರು ತಾಸು ನಡೆದ ಈ ಆಟದ ಯಾವುದೇ ಭಾಗವೂ ಕೂಡಾ ಬೀಳಾಗಲಿಲ್ಲ. ಇಂತಹ ಪ್ರದರ್ಶನ ಏರ್ಪಡಿಸಿದ ಮಹಾಬಲೇಶ್ವರ ಗೋಟಗಾರು ಇವರಿಗೆ ಮತ್ತು ಆಟದ ವಿಚಾರವನ್ನು ತಿಳಿಸಿದವರಿಗೂ ಮನಸ್ಸಿನಲ್ಲಿಯೇ ಧನ್ಯವಾದ ಅರ್ಪಿಸಿ ಆಟ ಮುಗಿಸಿ ಹೊರಟಾಗ ನನ್ನ ಮನಸ್ಸಿನಲ್ಲಿ ಮೂಡಿದ ಪ್ರಶ್ನೆ. ’ಹವ್ಯಾಸಿಗಳು ಇಷ್ಟು ಒಳ್ಳೆಯ ಆಟ ಮಾಡಬಹುದೇ?’ ಎಂದು!

ಆಟದ ವಿವರ:---
ಸ್ಥಳ : ಹಂಸಗಾರು ದೇವಸ್ಥಾನ
ದಿನಾಂಕ : 7 -11-2010, ಭಾನುವಾರ, ಸಂಜೆ 6:30

ಭಾಗವತರು : ರವೀಂದ್ರ ಕೃಷ್ಣ ಭಟ್ಟ, ಅಚವೆ
ಮದ್ದಳೆ : ಎ.ಪಿ. ಫಾಟಕ್, ಬೆಂಗಳೂರು.
ಚಂಡೆ : ಸಂಪ ಲಕ್ಷ್ಮೀನಾರಾಯಣ.

ದೇವೇಂದ್ರ : ಸುಜಯೀಂದ್ರ ಹಂದೆ, ಕೋಟ
ನರಕಾಸುರ : ಸಂಜಯ, ಬೆಳಿಯೂರು
ಕೃಷ್ಣ : ಶ್ರೀಮತಿ ಸೌಮ್ಯ ಅರುಣ, ಗೋಟಗಾರು
ಸತ್ಯಭಾಮೆ : ಸದಾಶಿವ ಭಟ್ಟ, ಯಲ್ಲಾಪುರ (ಇಡಗುಂಜಿ ಮೇಳದ ಈಗಿನ ಸ್ತ್ರೀವೇಷಧಾರಿ)
ಬಲ : ರಾಘವೇಂದ್ರ ಬೆಳಿಯೂರು ಮತ್ತು ಹರೀಶ.