Tuesday, November 3, 2009

ಮರೆಯಾದ ಮಹಾಬಲ

ಕೆರೆಮನೆ ಮಹಾಬಲ ಹೆಗಡೆ ಯಕ್ಷಗಾನ ಪ್ರಪಂಚ ಕಂಡ ಸರ್ವೋತ್ಕೃಷ್ಠ ಕಲಾವಿದ. ಹಿಮ್ಮೇಳ, ಮುಮ್ಮೇಳ ಎರಡರಲ್ಲೂ ಪರಿಣತಿ ಹೊಂದಿದ್ದ ಹೆಗಡೆ ಹಿಂದೂಸ್ತಾನಿ ಸಂಗೀತವನ್ನು ಅಭ್ಯಾಸ ಮಾಡಿಕೊಂಡಿದ್ದರು. ಇವರ ಅಳಿಯ (ಮಗಳ ಗಂಡ) ಪರಮೇಶ್ವರ ಹೆಗಡೆ ಪ್ರಖ್ಯಾತ ಹಿಂದೂಸ್ತಾನಿ ಸಂಗೀತಗಾರರು.

ಇವರ ಮೊದಲ ವೇಶವನ್ನು ನಾನು ರಂಗದಲ್ಲಿ ನೋಡಿದ್ದು ಪಟ್ಟಾಭಿಷೇಕದ ದಶರಥ, ಸಾಗರದಲ್ಲಿ ೧೯೮೯ ರ ಮಳೆಗಾಲದಲ್ಲಿ. ಆ ದಿವಸ ಇವರ ದಶರಥ, ಡಿ.ಜಿ. ಹೆಗಡೆ ಯವರ ರಾಮ, ಸುಬ್ರಹ್ಮಣ್ಯರ ಲಕ್ಷ್ಮಣ, ಮಂಟಪರ ಕೈಕೆ, ವಾಸುದೇವ ಸಾಮಗರ ಭರತ, ಕುಂಜಾಲು ಮಂಥರೆ. ಇಂತಾ ದಿಗ್ಗಜರ ಮೇಳಕ್ಕೆ ಆ ಕಾಲದಲ್ಲಿ ಅದ್ಭುತವೆನೆಸುವ ಕಂಠಸಿರಿಯನ್ನು ಹೊಂದಿದ್ದ ವಿದ್ವಾನ್ ಗಣಪತಿ ಭಟ್ಟರ ಭಾಗವತಿಕೆ. ಅಂತಾ ದಶರಥನನ್ನು ಈ ವರೆಗೂ ನಾನು ಕಂಡಿದ್ದೆ ಇಲ್ಲ. ಆ ವರ್ಷವೇ ಶುರುವಾದದ್ದು ಬಚ್ಚಗಾರು ಮೇಳ. ಅದರಲ್ಲಿ ಮಹಾಬಲ ಹೆಗಡೆ ಪ್ರಮುಖ ಪಾತ್ರಧಾರಿ. ಸಾಗರದ ಸುತ್ತ ಮುತ್ತ ನಡೆದ ಯಾವ ಆಟವನ್ನು ಬಿಡದೆ ನೋಡಿದ್ದೇನೆ. ಇವರ ದುಷ್ಟಬುದ್ದಿಯ ಪಾತ್ರಕ್ಕೆ ಹೆದರಿ ಹಿಂದೆ ಹೋಗಿ ಕುಳಿತಿದ್ದು ಉಂಟು. ಸರಿಸಾಟಿಯೇ ಇಲ್ಲದಂತ ಲಯಜ್ನಾನ, ಮನಸೆಳೆಯುವ ಕಂಠಸಿರಿ, ಪಾತ್ರಕ್ಕೆ ಮೀಸಲಾದ ವಿಶೇಷ ಕುಣಿತಗಳು, ಪದ್ಯ ನಿಂತಲ್ಲಿಗೆ ಮಾತನ್ನು ಆರಂಬಿಸುವ ವಿಧಾನ, ಅಕ್ಷರ ಅಕ್ಷರವನ್ನೂ ಬರೆದು ದಾಖಲಿಸಬಹುದಾದಷ್ಟು ಉತ್ತಮ ಸಾಹಿತ್ಯ, ಶೃತಿಜ್ಜ್ನಾನ, ವೇಶಭೂಷಣಗಳಲ್ಲಿ ತೋರುವ ಅಪೂರ್ವ ಆಸಕ್ತಿ, ಎಲ್ಲದರಲ್ಲೂ ಪರಿಪೂರ್ಣತೆಯನ್ನು ಬಯಸುವ ಹಪಹಪಿಕೆ ಮುಂತಾದ ವಿಶೇಷತೆಯಿಂದಾಗಿ ಬೇರೆಲ್ಲಾ ಕಲಾವಿದರಿಗಿಂತಾ ಭಿನ್ನವಾಗಿ ಎದ್ದು ಕಾಣುವ ಹೆಗಡೆಯವರೊಂದಿಗೆ ಯಕ್ಷಗಾನದಲ್ಲಿ ಭಾಗವಹಿಸುವ ಪುಣ್ಯ ನನಗೂ ಒದಗಿ ಬಂದಿತ್ತು.

ಅದು ಭುವನಗಿರಿ ಮೇಳ.೧೯೯೪-೯೫-೯೬ ರ ಸಮಯದಲ್ಲಿ ಮೆರೆದ ಮೇಳ. ಶಿರಸಿ ಮೇಳವನ್ನು ತ್ಯಜಿಸಿದ ಶಿರಳಗಿ ಭಾಸ್ಕರ ಜೋಶಿಯವರು ಭುವನಗಿರಿ ಮೇಳವನ್ನು ಕಟ್ಟಿದ್ದರು. ಮೇಳದಲ್ಲಿ ಮಹಾಬಲ ಹೆಗಡೆಯವರು, ಗೋಡೆ, ಡಿ.ಜಿ., ಕೊಳಗಿ ಅನಂತ ಹೆಗಡೆ, ಜೋಷಿ, ಕಣ್ಣೀಮನೆ ಗಣಪತಿ, ನರಸಿಂಹ ಚಿಟ್ಟಾಣಿ, ಹಾರ್ಸಿಮನೆ, ಸುಬ್ರಾಯ ಭಟ್ಟ ಮುಂತಾದ ಹೆಸರಾಂತ ಕಲಾವಿದ್ದರು.ಹಿಮ್ಮೇಳದಲ್ಲಿ ಗಿರಿಗಡ್ಡೆ, ಕೊಳಗಿ ಮಾಧವ, ಪರಮೇಶ್ವರ ಭಂಡಾರಿ, ಕೆಸರಕೊಪ್ಪ ವಿಘ್ನೇಶ್ವರ, ಅಶೋಕ ಕ್ಯಾಸನೂರು ಮತ್ತು ನಾನು.ವಾರಕ್ಕೆ ೨-೩ ಕಾರ್ಯಕ್ರಮ ಇರುತ್ತಿತ್ತು.

ನಾನು ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಿರಲಿಲ್ಲ, ಕೆಲವೊಂದು ಆಟಕ್ಕೆ ಮಾತ್ರ ಹೋಗಿದ್ದೇನೆ. ಒಂದು ಕಾರ್ಯಕ್ರಮ ತಾರಗೋಡು ಎಂಬಲ್ಲಿ. ಆ ದಿನ ಪಟ್ಟಾಭಿಷೇಕ - ಗದಾಯುದ್ಧ. ಮಹಾಬಲ ಹೆಗಡೆಯವರ ದಶರಥ, ಗೋಡೆಯವ ಕೌರವ. ಮೊದಲು ಚಂಡೆಗೆ ಹೋಗುವುದು ನಾನೆ ಆಗಿತ್ತು. ಚೀಲದಿಂದ ಚಂಡೆ ತೆಗೆಯುವಷ್ಟರಲ್ಲೆ ಒಬ್ಬರು ಬಂದು ಹೇಳಿದರು, ಮಹಾಬಲ ಹೆಗಡೆಯವರು ಕರೆಯುತ್ತಿದ್ದಾರೆ ಎಂದು. ಹುಂಬನಂತೆ ಇದ್ದ ನಾನು ಅವರ ಎದುರಿಗೆ ಹೋಗಿ ನಿಂತೆ. ಅವರು ಹೇಳಿದ್ದು ಇಷ್ಟೆ " ಹಾರ್ಮೋನಿಯಂನಲ್ಲಿ ಮೊದಾಲ್ನ ಮನೆ ಶೃತಿ ಹಾಕು" ಎಂದು. ಸರಿ ಆಟ ಪ್ರಾರಂಭವಾಯಿತು ಮೊದಲಿಗೆ ದಶರಥನ ಒಡ್ಡೋಲಗ. ೨ ಪದ್ಯ ಮುಗಿದಿತ್ತಷ್ಟೆ, ಮತ್ತೊಂದು ಪಾತ್ರ ಮಾತಾಡುತ್ತಿರುವಾಗ ರಂಗದಲ್ಲಿ ಚಂಡೆ ಬಾರಿಸುತ್ತಿದ್ದ ನನ್ನಲ್ಲಿಗೆ ನಿಧಾನವಾಗಿ ಬಂದು "ಇನ್ನೊಂದು ಮನೆ ಮೇಲೆ ಹಾಕು" ಎಂದು ಆಜ್ನಾಪಿಸಿದರು. ಸರಿ ನಾನು ಭಾಗವತರಲ್ಲಿ ಹೇಳಿದಾಗ ಅವರಿಗೂ ಅದೇ ಬೇಕಾಗಿತ್ತು. ಆದರೆ ಆ ಸಮಯದಲ್ಲಿ ನನಗೆ ಸರಿಯಾಗಿ ಶೃತಿ ಮಾಡಲು ಬರುತ್ತಿರಲಿಲ್ಲ. ನಿಧಾನವಾಗಿ ಒದ್ದಾಡುತ್ತಾ ಇರುವಾಗ ಅವರು ಓರೆಗಣ್ಣಿನಲ್ಲಿ ಗಮನಿಸುತ್ತಾ ಇದ್ದುದು ನನಗೆ ಗೊತ್ತಾಯಿತು. ಒಮ್ಮೆ ಮೆಲುವಾಗಿ ತಟ್ಟಿದೆ. ಆದರೆ ಶಬ್ದ ಸ್ವಲ್ಪ ಹೆಚ್ಚಾಯಿತೋ ಏನೋ ತಕ್ಷಣ ಸಿಟ್ಟುಗೊಂಡವರೇ "ಎಂತಾ ರಗಳೆ ನಿಂದು ಎದ್ದೋಗ್" ಎಂದು ಹೇಳಿ ಮುಗಿಸುವುದರಷ್ಟರಲ್ಲಿ ನಾನು ಚೌಕಿಗೆ ಓಡಿಯಾಗಿತ್ತು. ಮುಖ್ಯ ಚಂಡೆವಾದಕನು ಹೆದರಿ ಚೌಕಿಯಲ್ಲೇ ಮುದುರಿ ಕುಳಿತ. ಪ್ರಸಂಗದ ಅರ್ಧ ಭಾಗ ಕೇವಲ ಮದ್ದಲೆವಾದನ ದೊಂದಿಗೆ ಕಳೆಯಿತು. ಮಧ್ಯೆ ಅವರು ಓಳಗೆ ಬಂದಾಗ ನಾನು ವಿನಯದಿಂದ ಅವರಲ್ಲಿ ’ ನಂಗೆ ಚಂಡೆ ಶೃತಿ ಮಾಡಕ್ಕೆ ಹೆಚ್ಚು ಅನುಭವ ಇಲ್ಲೆ, ತಪ್ಪಾದರೆ ನಿಮ್ಮ ಹೊಟ್ಟಿಗೆ ಹಾಕ್ಯಳಿ’ ಎಂದು ಬೆಪ್ಪನಂತೆ ಕೈಕಟ್ಟಿಕೊಂಡು ನಿಂತೆ. ’ಹ್ಹೂಂ ಎಲ್ಲಾ ಹೊಟ್ಟಿಗೆ ಹಾಕ್ಯಂಡೆ ನನ್ನ ಹೊಟ್ಟೆ ಇಷ್ಟು ದೊಡ್ಡ ಆಯ್ದು, ನಡಿ ನಡಿ ರಂಗಸ್ಥಳಕ್ಕೆ ಚಂಡೆ ಹಿಡ್ಕ, ಮದ್ದಲೆಗಾರನ(ಪರಮೇಶ್ವರ ಭಂಡಾರಿ,ಕರ್ಕಿ) ಹತ್ರ ಶೃತಿ ಮಾಡಿಕೊಡಕ್ಕೆ ಹೇಳು’ ಎಂದು ಗರ್ಜಿಸಿದರು. ಹೀಗೆ ಪ್ರಸಂಗ ಮುಗಿಯಿತು. ನಾನು ಒಳಗೆ ಬಂದೆ. ವೇಶ ಕಳಚಿಟ್ಟವರೆ ನನ್ನನ್ನು ಕರೆದು ’ ಆ ಚಂಡೆ ತಗಬಾ, ನಾ ಹೇಳ್ತೆ ಹೆಂಗೆ ಸುರ್ತಾನ್ ಮಾಡದು ಅಂತ’ ಎಂದಾಗ ನನಗೆ ಆಶ್ಚರ್ಯ. ಸರಿ ಎಂದು ಚಂಡೆಯನ್ನು ಅವರ ಮುಂದೆ ಇಟ್ಟಾಗ ಅದನ್ನು ಸುರ್ತಾನ್ (ಶೃತಿ) ಮಾಡುವ ಟೆಕ್ನಿಕ್ ಹೇಳಿಕೊಟ್ಟರು. ನನಗೆ ಆ ವಾದನ ಶೃತಿ ಮಾಡುವ ಕ್ರಮ ತಿಳಿದಿದ್ದೇ ಆವಾಗ!!! . ಇದು ಹಿಂಗಂತ ನಂಗೆ ಗೊತ್ತಿರ್ಲೆ ತುಂಬಾ ಉಪಕಾರಾತು ಎಂಬ ನನ್ನ ಮಾತಿನತ್ತ ವಿಶೇಷ ಗಂಭೀರ ನಗೆಯೊಂದನ್ನು ಬೀರಿದರು. ಆ ವಕ್ರಹಲ್ಲಿನ ಬಾಯ ನಗುವೇ ಒಂದು ಚಂದ. ಆಗ ಅಲ್ಲೇ ಇದ್ದ ಕೊಳಗಿ ಅನಂತಜ್ಜ ’ಅಪ್ಪೀ ಯಕ್ಷಗಾನದಲ್ಲಿ ಚಂಡೆ ಶೃತಿ ಮಾಡದು ಹೇಂಗೆ ಅಂತಾ ಮೊದಾಲ್ ತೋರಿಸಿದವರೇ ಅವ್ರು ಎಂದಾಗ ನನಗೆ ಆನಂದವಾಯಿತು. ಅಷ್ಟು ದೊಡ್ಡ ಮನುಷ್ಯ ನನಗೂ ಅದರ ಟೆಕ್ನಿಕ್ ತಿಳಿಸಿದನಲ್ಲ ಎಂದು. ನಾನು ಸುಮ್ನೆ ಅವರಲ್ಲಿ ಇದರ ಮುಚಿಗೆ ಯಾವ ಚರ್ಮದ್ದು ಅಂತ ಕೇಳಿದಾಗ ಹುಸಿ ಕೋಪದಿಂದ ಸರಿ ಬಾರ್ಸದೆ ಹಡೇ ಮಾಡಿದ್ರೆ ನಿನ್ನ ಬೆನ್ನಿನ ಚರ್ಮ ಸುಲಿದು ಮುಚಿಗೆ ಮಾಡ್ಸ್ತೆ ಎಂದರು. ೨-೩ ಡಬ್ಬಲ್ ಪೆಟ್ಟು ಬಾರ್ಸುವ ವಿಧಾನ ಹೇಳಿಕೊಟ್ಟರು. ಈ ಆಟಕ್ಕು ಮೊದಲು ನಾನು ಅವರ ಪಾತ್ರಕ್ಕೆ ಚಂಡೆ ಬಾರಿಸಿರಲಿಲ್ಲವಾದರೂ ಅವರಲ್ಲಿ ಸುಮ್ಮನೇ ಮಾತನಾಡುತಿದ್ದೆ. ಅವರು ಹೇಳಿದ್ದಕ್ಕಲ್ಲ ಹೂಹಾಕುವುದಷ್ಟೇ ನನ್ನ ಕೆಲ್ಸವಾಗಿತ್ತು. ಈ ಆಟದ ನಂತರ ೩-೪ ಪಾತ್ರಗಳಿಗೆ ಚಂಡೆಗಾರನಾಗಿ ಒದಗುವ ಸಂಧರ್ಭ ಬಂದಿದ್ದರೂ ಅಲ್ಲಿ ಯಾವ ತಾಪತ್ರಯವುಂಟಾಗಲಿಲ್ಲ.

ಅದಾದ ನಂತರ ಅವರನ್ನು ಕಂಡಿದ್ದು ಹೊಸನಗರ ರಾಮಚಂದ್ರಾಪುರಲ್ಲಿ ನಡೆದ ಯಕ್ಷಗಾನ ಸಮ್ಮೇಳನದಲ್ಲಿ(೨೦೦೨)
ಅವರು ಸಮ್ಮೇಳನದ ಅಧ್ಯಕ್ಷರು. ೩ ದಿನದ ಕಾರ್ಯಕ್ರಮ. ಹೊರಗಡೆ ಒಂದು ಸಾಟಿ ಪಂಜೆ ಉಟ್ಟು ತಿರುಗಾಡುತಿದ್ದರು, ಸಕ್ಕರೆ ಕಾಯಿಲೆಯಿಂದಾಗಿ ಪದೇ ಪದೇ ಮೂತ್ರವಿಸರ್ಜನೆ ಮಾಡಬೇಕಾದ ಪರಿಸ್ತಿತಿ ಇತ್ತು. ಅವರ ಹತ್ರ ಹೋದ ನಾನು ’ಅಜ್ಜ ನಾನು ಅಪ್ಪಿ ಚಂಡೆ ಬಾರ್ಸ್ತ ಇದ್ದ್ನಲಾ’ ಅಂದೆ ಸಲುಗೆಯಿಂದ. ಸರಿ ಶುರುವಾಯಿತು ಮಾತಿನ ವರಸೆ. ಎಲ್ಲಿದ್ದೆ, ಎಂತಾ ಮಾಡ್ತಾ ಇದ್ದೆ ಎಲ್ಲಾ ಕೇಳಿದರು. ಈಗೆಲ್ಲಾ ಕೆಲವು ಗಣಗಾಂಪರೆಲ್ಲಾ ಆಟ ಮಾಡದು ನೋಡಿದ್ರೆ ತಮಾ ಎಂದು ತಮ್ಮ ಅಸಹನೆ ವ್ಯಕ್ತ ಪಡಿಸಿದರು. ಪುಣ್ಯಕ್ಕೆ ಆಟದ ವಿಷಯ ನಾನು ಮಾತಾಡಿರಲಿಲ್ಲ, ಇಲ್ಲದೇ ಹೋದರೆ ನನ್ನ ಬುಡಕ್ಕೇ ಬರುತ್ತಿತ್ತು. ಅಲ್ಲಿ ಅವರು ಮಾಡಿದ ಅಧ್ಯಕ್ಷ ಬಾಷಣವು ಜೀವಮಾನದಲ್ಲಿ ನಾನು ನೋಡಿದ ಅತ್ಯುತ್ತಮ ಭಾಷಣಗಳಲ್ಲಿ ಒಂದು.

ಕಳೆದ ನವೆಂಬರನಲ್ಲಿ (ನವೆಂಬರ ೧೨, ೨೦೦೮) ಅವರ ಕುರಿತಾದ ಪುಸ್ತಕ ಬಿಡುಗಡೆ, ಸನ್ಮಾನ ಕಾರ್ಯಕ್ರಮಕ್ಕೆ ಬಂದಿದ್ದರು. ಅವತ್ತು ಯಕ್ಷಗಾನದ ಗಣಪತಿ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು, ಇದರಲ್ಲಿ ಭಾಗವಹಿಸುವ ಪುಣ್ಯ ನನ್ನದಾಯಿತು. ನೆಬ್ಬೂರು ಭಾಗವತರು, ಎ.ಪಿ. ಫಾಟಕ್ ಹಾಗು ನಾನು ಪ್ರಾರ್ಥನೆಯನ್ನು ಮುಗಿಸಿದೆವು ಅವರನ್ನು ಮಾತಾಡಿಸಿದಾಗ ಮೊದಲು ಗುರುತು ಸಿಗಲಿಲ್ಲ. ಆಮೇಲೆ ಪ್ರಾರ್ಥನೆಗೆ ಚಂಡೆ ಬಾರಿಸಿದನ್ನು ನೋಡಿದ ಅವರು ’ಚಂಡೆ ಅಪ್ಪಿಯನಾ’ ಎಂದು ಗುರುತಿಸಿದಾಗ ಜೀವನ ಸಾರ್ಥಕವೆನಿಸಿದ ಅನುಭವವಾಯಿತು.

ನೋಡಲು ಸುಮಾರಿಗೆ ನನ್ನ ಅಜ್ಜನ ಪ್ರತಿರೂಪದಂತೇ ಇದ್ದ ಅವರನ್ನು ನಾನು ಅಜ್ಜ ಎಂದೇ ಸಂಭೋದಿಸುತ್ತಿದ್ದೆ. ಮೊನ್ನೆ ೨೯ ರಂದು ಸುಮಾರು ೧:೩೦ ಕ್ಕೆ ಅವರು ನಿಧನರಾದರೆಂದು ಸುದ್ದಿ ಬಂದಾಗ ಒಮ್ಮೆಲೆ ಜೀವವು ಚಡಪಡಿಸಿತು. ರಂಗದ ಮೇಲೆ ನನಗೆ ಅತ್ಯಂತ ಹಿಡಿಸಿದ ಪಾತ್ರಧಾರಿಯೆಂದರೆ( ಪ್ರೇಕ್ಷಕನಾಗಿ) ಮಹಾಬಲ ಹೆಗಡೆ. ಮೇಳದ ಆ ಕಿರು ತಿರುಗಾಟದಲ್ಲಿ, ಅವರ ಹತ್ರ ಬೈಸಿಕೊಂಡ, ಮಾತಾಡಿದ ಎಲ್ಲವೂ ನೆನಪಾಯಿತು. ಆ ನೆನಪಿನೊಂದಿಗೇ ಈ ಬರಹವನ್ನು ಇಲ್ಲಿ ಇಳಿಸಿದ್ದೇನೆ. ಭಗವಂತನು ಅವರ ಆತ್ಮಕ್ಕೆ ಶಾಂತಿ ಕೊಡಲಿ, ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ಕೊಡಲಿ ಎಂಬ ಪ್ರಾರ್ಥನೆ ಯೊಂದಿಗೆ ಮುಕ್ತಾಯಗೊಳಿಸುತ್ತಿದ್ದೇನೆ.

ಹಡಿನಬಾಳ ಯಕ್ಷಪರ್ವ ನಾ ಕಂಡಂತೆ -- ಮುಂದುವರೆದುದು

ಆಟದ ದಿನ ನಿರೀಕ್ಷಿಸಿದಂತೆ ಜನಸಾಗರವೇ ಸೇರಿತ್ತು. ಮೊದಲ ಭಾಗದ ಬಲರಾಮ ಪಾತ್ರ ಮಾಡಿದ ಸುಧೀಂದ್ರ ಹೊಳ್ಳರ ಪ್ರವೇಶದಿಂದ ಶುರುವಾದದ್ದು ನಂತರ ಯಲಗುಪ್ಪ ಸುಬ್ರಹ್ಮಣ್ಯರ ಸುಭದ್ರೆ ಪ್ರವೇಶ ಹಾಗೂ ಬಲರಾಮ- ಸುಭದ್ರೆ ಯರ ಸಂಭಾಷಣೆ ರೋಚಕವಾಗಿತ್ತು. ಯಾವತ್ತು ಸರಿಯಾದ ಹೋಮ್ ವರ್ಕ್ ಮಾಡಿಕೊಂಡೇ ರಂಗಕ್ಕಿಳಿಯುವ ಹೊಳ್ಳರು ಸಮರ್ಥವಾಗಿ ಬಲರಾಮನ ವಾದ ಮಂಡಿಸಿದರು. ಆಭಿಮನ್ಯುವಿನ ಪಾತ್ರಧಾರಿ ಅರ್ಪಿತಾ ಹೆಗಡೆ ಕುಣಿತದಲ್ಲಿ ಮಿಂಚಿದರೂ ವೇಷಭೂಷಣವೆಲ್ಲ ಕಳಚಿಕೊಂಡಿದ್ದು ಅಬಾಸವೆನಿಸಿತು. ಆನಂತರ ಪ್ರವೇಶವಾದದ್ದು ಮುಖ್ಯ ಆಕರ್ಷಣೆಯಾಗಿದ್ದ ಶ್ರೀಪಾದ ಹೆಗಡೆಯವರು. ಘಟೋತ್ಕಚನ ಸಾಂಪ್ರದಾಯ ಒಡ್ಡೋಲಗ ಮಾಡಿದ್ದು ಅತ್ಯಂತ ಸಮಯೋಚಿತವೆನಿಸಿತು. ನಂತರ ಅಭಿಮನ್ಯು- ಘಟೋತ್ಕಚರ ಯುದ್ಧ, ಸುಭದ್ರೆಯ ರೋಧನೆ, ಸುಭದ್ರೆ-ಘಟೋತ್ಕಚ ಸಂಬಾಷಣೆ ಎಲ್ಲೂ ಬೀಳಾಗಲಿಲ್ಲ ಈ ಸನ್ನಿವೇಶದ ನಂತರ ಅಭಿನಂದನಾ ಕಾರ್ಯಕ್ರಮವಿತ್ತು. ಮನಸ್ಸಿನ ಭಾವನೆಗಳನ್ನು ಹತ್ತಿಕ್ಕಿಕ್ಕೊಂಡು ಮಾತಾಡಿದ ಶ್ರೀಪಾದ ಹೆಗಡೆಯವರು ನನಗೆ ನಿಮ್ಮೆಲರ ಅಭಿಮಾನವಿದ್ದರೆ ಸಾಕು ಅನುಕಂಪ ಬೇಡ, ನಮ್ಮ ಮನೆಯಲ್ಲಿ ಟಿವಿ ಮೊದಲಾದ ಪರಿಕರಗಳಿಲ್ಲ ಅಂದು ನಮ್ಮ ಮನೆಯಲ್ಲಿ ಯಾರಿಗೂ ಬೇಸರವಿಲ್ಲ ಎಂದು ಮಾರ್ಮಿಕ ವಾಗಿ ನುಡಿದರು.

ಆನಂತರ ಕಥಾಭಾಗ ಮುಂದುವರೆಯಿತು. ಸುಬ್ರಹ್ಮಣ್ಯ ಚಿಟ್ಟಾಣಿಯವರ ಆರಕ್ಕೇರದ ಮುರಕ್ಕಿಳಿಯದ ಕೃಷ್ಣ, ಅಪರೂಪಕ್ಕೆ ಬಲರಾಮನ ಪಾತ್ರ ಮಾಡಿದ ಚಿಟ್ಟಾಣಿಯವರ ಅದ್ಭುತವೆನಿಸುವ ರಂಗ ಚಲನೆ ಮುದ ನೀಡಿತು.

ಹಿಮ್ಮೇಳದಲ್ಲಿ ಭಾಗವತರಾಗಿ ಕೊಳಗಿ ಕೇಶವ ಹೆಗಡೆ ಮತ್ತು ಸರ್ವೇಶ್ವರ ಹೆಗಡೆ, ಮದ್ದಳೆಯಲ್ಲಿ ನಾಗರಾಜ ಭಂಡಾರಿ ಮತ್ತು ಗಣೇಶ ಭಂಡಾರಿ, ಚಂಡೆಯಲ್ಲಿ ಅಮೃತದೇವ ಮತ್ತು ಮುರೂರು ಸುಬ್ರಹ್ಮಣ್ಯ ಸಹಕರಿಸಿದರು.

ಅಂತೂ ಹಡಿನಬಾಳ ಯಕ್ಷಪರ್ವ ಎಂಬ ಕಾರ್ಯಕ್ರಮದಲ್ಲಿ, ಆಟ ಹಾಗೂ ಸಭಾ ಕಾರ್ಯಕ್ರಮ ಎರಡು ಸಮಯೋಚಿತವಾಗಿ ಮೂಡಿ ಬಂದ ಕಾರಣ ಇದೊಂದು ಉತ್ತಮ ಪ್ರಯೋಗವಾಗಿ ಹೊಮ್ಮಿ ಬಂದಿತು.

Friday, September 25, 2009

ಯಕ್ಷಗಾನದಲ್ಲಿ ಇಂಗ್ಲೀಷ್

ಯಕ್ಷಗಾನ ಮಾತುಗಾರಿಕೆಯಲ್ಲಿ ಇಂಗ್ಲೀಷ್ ಪದಗಳು ಬರಬಾರದು. ಹಾಗೊಮ್ಮೆ ಅಪ್ಪಿ ತಪ್ಪಿ ಒಂದು ಶಬ್ದ ಬಂದರೂ ಸಾಕು ಕಲಾವಿದರು ನಗೆಪಾಟಲಿಗೆ ಗುರಿಯಾಗುತ್ತಾರೆ. ಇನ್ನು ಪ್ರಸಿದ್ಧ ಕಲಾವಿದರಾದರೆ ಮುಗಿದೇ ಹೋಯಿತು ಬೆಳಿಗ್ಗೆ ಚೌಕಿಯಲ್ಲಿ ಹಲವಾರು ಜನರಿಂದ ಉಪದೇಶ ಕೇಳಬೇಕಾದಂತ ಪರಿಸ್ಥಿತಿ. ಹೀಗಿದ್ದು ಕೂಡಾ ಒಂದು ಇಂಗ್ಲೀಷ್ ಶಬ್ದ ನುಡಿದು ಕೊನೆಗೆ ಅದೇ ಸರಿಯೆಂದು ಸಮರ್ಥಿಸಿಕೊಂಡ ಪ್ರಸಂಗವನ್ನು ಈವರೆಗೆ ನಾನೊಮ್ಮೆ ಮಾತ್ರ ನೋಡಿದ್ದೇನೆ.

ಪ್ರಸಂಗದಲ್ಲಿ ಎರಡು ಪಾತ್ರಗಳು ಸಂಭಾಷಿಸುತ್ತಿದ್ದವು. ಇಬ್ಬರೂ ಮಾತಿನ ಮಲ್ಲರೆ. ಸಂಭಾಷಣೆ ನಡುವೆ ೧ ನೇ ಪಾತ್ರಧಾರಿ ಆಕಸ್ಮಿಕವಾಗಿ ಸರಿ ಎನ್ನುವದರ ಬದಲು ’ಕರೆಕ್ಟ್’(correct) ಎಂದರು. ಎದುರಿನ ೨ ನೇ ಪಾತ್ರಧಾರಿ ತಕ್ಷಣ ಆಂ !!!! ಎಂದಾಗ ಒಮ್ಮೆ ಸಭೆ ( ನನ್ನನ್ನೂ ಸೇರಿ) ಗೊಳ್ಳೆಂದಿತು. ಆದರೆ ಇದರಿಂದ ಸ್ವಲ್ಪವೂ ವಿಚಲಿತರಾಗದ ೧ ನೇ ಪಾತ್ರಧಾರಿಯು "ನಾನು ಹೇಳಿದ್ದು ’ಕರೆ’ ಎಂಬುದಾಗಿ, ಇದಕ್ಕೆ ಸರಿ ಎಂಬ ಅರ್ಥವಿದೆ. ಕಡೆಯ ’ಕ್ಟ್’ಎಂಬುದು ಅರ್ಧಾಕ್ಷರವಾದ್ದರಿಂದ ಅದು ಶೂನ್ಯಾಕ್ಷರವಾಗುತ್ತದೆ. ಆ ಶೂನ್ಯಾಕ್ಷರವನ್ನು ನಿರ್ಲಕ್ಷಿಸಬಹುದೆಂದು ವ್ಯಾಕರಣ ಹೇಳುತ್ತದೆ. ಆದ್ದರಿಂದ ನಾನು ಹೇಳಿದ ಪದದಲ್ಲಿ ಯಾವುದೇ ತಪ್ಪಿಲ್ಲ" ಎಂದಾಗ ಹಾಗೂ ಆ ಸಮರ್ಥನೆಗೆ ೨ ನೇ ಪಾತ್ರಧಾರಿಯು ’ನೀ ಜಾಣನಹುದಹುದು’ ಎಂದಾಗ ಇಡೀ ಸಭೆ ಕರತಾಡನ ಮಾಡಿತು.

ಪೆರ್ಡೂರು ಮೇಳದ ಆಟ, ನಗರದಲ್ಲಿ ( ಬಹುಷಃ 1993-94)
೧ ನೇ ಪಾತ್ರಧಾರಿ : ದಿವಂಗತ ನಗರ ಜಗನ್ನಾಥ ಶೆಟ್ಟಿ
೨ ನೇ ಪಾತ್ರಧಾರಿ : ರಮೇಶ ಭಂಡಾರಿ, ಮುರೂರು.

Tuesday, July 28, 2009

ಹಡಿನಬಾಳ ಯಕ್ಷಪರ್ವ - ನಾ ಕಂಡಂತೆ

ಕಳೆದ ಜುಲಾಯಿ ೫ ರಂದು ನಡೆದ ಈ ಕಾರ್ಯಕ್ರಮದ ರೂಪುರೇಶೆ ಆರಂಭವಾದದ್ದು ಬೇಸಿಗೆಯ ಶುರುವಿನಲ್ಲಿ.

ಬಡಗುತಿಟ್ಟಿನ ಆರ್ಥಿಕವಾಗಿ ದುರ್ಬಲವಾದ ಕಲಾವಿದರನ್ನು ಲಕ್ಷ ರೂಪಾಯಿಗಳೊಂದಿಗೆ ಸನ್ಮಾನಿಸುವ ಬೆಂಗಳೂರಿನ ’ಯಕ್ಷಗಾನ ಯೋಗಕ್ಷೇಮ ಅಭಿಯಾನ’ವು ಈ ವರ್ಷ ಆಯ್ದುಕೊಂಡಿದ್ದು ಪ್ರಸಿದ್ದ ಎರಡನೇ ವೇಷಧಾರಿಯಾದ ಹಡಿನಬಾಳ ಶ್ರೀಪಾದ ಹೆಗಡೆಯವನ್ನು. ಶ್ರೀ ವಿ.ಆರ್.ಹೆಗಡೆ ಯವರ ಈ ಆಯ್ಕೆಗೆ ಕಳೆದ ಸಾಲಿನಂತೆ ಯಾರಿಂದಲೂ ವಿರೋಧ ಉಂಟಾಗಲಿಲ್ಲ. ಸನ್ಮಾನಕ್ಕೆ ಯೋಗ್ಯರಾಗಿದ್ದ, ಕಡುಬಡತನದಲ್ಲೂ ಸ್ವಾಭಿಮಾನ ಜೀವನ ನಡೆಸುವ ಶ್ರೀಪಾದ ಹೆಗಡೆಯವರ ಬಗ್ಗೆ ಎಲ್ಲರಿಗೂ ಅಭಿಮಾನವಿತ್ತು ಹಾಗೆ ಅನುಕಂಪವೂ ಕೂಡಾ ಇತ್ತು. ಪ್ರಸಂಗ ಕನಕಾಂಗಿ ಕಲ್ಯಾಣ ಮಾಡಿ ಅಂತ ಒಬ್ಬರಿಂದ ಸಲಹೆ ಬಂದು ಅದೇ ಊರ್ಜಿತವಾಯಿತು. ಜುಲಾಯಿ ೫ ಕ್ಕೆ ಎ.ಡಿ.ಎ ರಂಗಮಂದಿರದಲ್ಲಿ ನಡೆಸುವ ತೀರ್ಮಾನವಾಯಿತು.

ಮೊದಲು ಮಾತಾಡಿದ್ದು ಸಂಘಟಕರೇ ಕಲಾವಿದರನ್ನು ಆಯ್ಕೆ ಮಾಡಬೇಕು ಹಾಗೂ ಚಿಟ್ಟಾಣಿಯವರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು. ಮಾತಿನಂತೆ ಸಂಘಟಕರಾದ ಮನೋಜ ಭಟ್ಟರು, ಸುರೇಶ ಹೆಗಡೆಯವರು ಪಾತ್ರಗಳ ಆಯ್ಕೆ ಮಾಡುವ ಹೊಣೆಗಾರಿಕೆಯನ್ನು ಹೊತ್ತರು. ಸುರೇಶ ಹೆಗಡೆಯವರು ’ಅಭಿಮನ್ಯು’ವಿನ ಪಾತ್ರವನ್ನು ಬುಕ್ ಮಾಡಿದರೆ ಬೇರೆ ಪಾತ್ರಗಳಿಗೆ ಚಿಟ್ಟಾಣಿ, ಹೊಳ್ಳ, ಯಲಗುಪ್ಪ,ಶ್ರೀಧರ ಕಾಸರಕೋಡ್,ಸುಬ್ರಹ್ಮಣ್ಯ ಚಿಟ್ಟಾಣಿ, ಅರ್ಪಿತಾ ಹೆಗಡೆ ಮೊದಲಾದವರೆಲ್ಲ ಆಯ್ಕೆಯಾದರು

ಬೆಂಗಳೂರಿನ ಸೂಪರ್ ಹಿಟ್ ಭಾಗವತರಾದ ಕೊಳಗಿ ಕೇಶವ ಹೆಗಡೆ ಹಾಗೂ ಸರ್ವೇಶ್ವರ ಹೆಗಡೆ ಮುರೂರು ಆಯ್ಕೆಯಾದರೆ ಮದ್ದಲೆವಾದನಕ್ಕೆ ಶಂಕರ ಭಾಗವತರು ಎಂದು ಆಯ್ಕೆ ಮಾಡಿದರು ಚಂಡೆವಾದನಕ್ಕೆ ಅಮೃತದೇವ (ಅಂದರೆ ನಾನು)ನನ್ನು ಒಪ್ಪಿಸಲಾಯಿತು.

ಇನ್ನೇನು ಆಟಕ್ಕೆ ೪-೫ ದಿವಸ ಇದ್ದಾಗ ಶ್ರೀಪಾದ ಹೆಗಡೆಯವರು ಸಧ್ಯ ಬೆಂಗಳೂರಿನಲ್ಲೇ ಇರುವ ಕಣ್ಣೀಮನೆ ಗಣಪತಿ ಯವರು ಅಭಿಮನ್ಯುವಿನ ದ್ವಿತೀಯಾರ್ಧ ಪಾತ್ರ ಮಾಡಲಿ ಎಂದಾಗ ಸುರೇಶ ಹೆಗಡೆಯವರಿಂದ ತೀವ್ರ ವಿರೋಧ ವ್ಯಕ್ತವಾಗಿ ಮಾತುಕಥೆಗಳು ವಿಕೋಪಕ್ಕೆ ತಿರುಗಿ ಅಂತೂ ಕೊನೆಗೆ ಶ್ರೀಪಾದ ಹೆಗಡೆಯವರು ಮುಖಭಂಗಕ್ಕೊಳಗಾಗ ಬೇಕಾಯಿತು. ಆಮೇಲೆ ಚಂಡೆವಾದನಕ್ಕೆ ಅವರು (ಶ್ರೀಪಾದ ಹೆಗಡೆಯವರು )ಮೊದಲೇ ಮತ್ತೊಬ್ಬರಿಗೆ ಹೇಳಿರುವ ವಿಷಯ ಗೊತ್ತಾದರೂ ನಾನು ಅದಕ್ಕೆ ವಿರೋಧಿಸಲಿಲ್ಲ. ನನ್ನ ಅತೀ ಆತ್ಮೀಯರಲ್ಲಿ ಒಬ್ಬನಾದ ಕೆರೋಡಿ ಸುಬ್ಬಣ್ಣ ಅವತ್ತು ನನ್ನೊಂದಿಗೆ ಚಂಡೆವಾದನಕ್ಕೆ ಆಯ್ಕೆಯಾದರು. ಈ ಮಧ್ಯೆ ಶಂಕರ ಭಾಗವತರು ಆಟಕ್ಕೆ ಕೈಕೊಡುವ ವಿಷಯ ಸ್ಪಷ್ಠವಾದಾಗ ಸಾಲಿಗ್ರಾಮ ಮೇಳದ ನಾಗರಾಜ ಭಂಡಾರಿ, ಮತ್ತು ಬೆಂಗಳೂರಿನ ಉದ್ಯಮಿ ಗಣೇಶ ಭಂಡಾರಿಯವರನ್ನು ಒಪ್ಪಿಸಲಾಯಿತು. ((ಆಟದ ವಿಚಾರ ಮುಂದಿನ ಸಂಚಿಕೆಯಲ್ಲಿ ನಿರೀಕ್ಷಿಸಿ)