Wednesday, May 9, 2012

ಬಯಲಾಟ - ತಿರುಗಾಟ (ಮೂರು ರಾತ್ರಿ, ಏಳು ಆಟ).

ಮೊದಲನೇ ದಿನ  : April 14,2012

ಬಯಲಾಟ ನೋಡದೇ ಹಲವು ವರ್ಷಗಳೇ ಆಗಿದ್ದವು. ಪ್ರತೀ ಸಲ ಹೊರಡಬೇಕೆಂದಾಗ ಏನಾದರೂ ವಿಘ್ನ ಎದುರಾಗುತಿತ್ತು. ಏನಾದರಾಗಲಿ ಈ ಬಾರೀ ಹೋಗಲೇಬೇಕೆಂದು ತೀರ್ಮಾನಿಸಿ ಮಿತ್ರ ಕ್ಯಾಸನೂರು ಅರುಣನನ್ನು ಕಾರಿನಲ್ಲಿ ಹತ್ತಿಸಿಕೊಂಡು ಹಸಿರುಮಕ್ಕಿ ಲಾಂಚ್ ಹತ್ರ ಬಂದಾಗ ಮಧ್ಯಾಹ್ನ ಮೂರೂ ಮುಕ್ಕಾಲು, ಏಪ್ರಿಲ್ ೧೪,೨೦೧೨ ರ ಶನಿವಾರ. ಯಾರಿಗೂ ಹೇಳದೇ ನಾವಿಬ್ಬರೇ ಹೊರಟಿದ್ದೆವು. ನಮ್ಮೊಟ್ಟಿಗೆ ಇನ್ನೂ ಕೆಲವರು ಬರಲು ತಯಾರಿದ್ದರೂ ಕೂಡಾ, ಎಲ್ಲರೂ ಸೇರಿದರೆ ಆಟ ನೋಡುವ ಬದಲು ಇತರೇ ಕಾರ್ಯಕ್ರಮಗಳ ಭರಾಟೆಗಳೇ ಹೆಚ್ಚಾಗುವ ಭಯವಿದ್ದುದರಿಂದ ಯಾರನ್ನೂ ಸಂಪರ್ಕಿಸದೇ ಒಂದು ರೀತಿ ಕಳ್ಳತನದಿಂದಲೇ ಎಲ್ಲರಿಂದ ತಪ್ಪಿಸುಕೊಂಡು ಲಾಂಚ್ ಹತ್ರ ಬಂದರೆ ಅಲ್ಲಿ ವಾಹನಗಳ ಸಂತೆ.

ಮಾರ್ಚ್ ತಿಂಗಳಲ್ಲಿ ಸಾಗರದ ಕಡೆ ತಿರುಗಾಟದಲ್ಲಿದ್ದ ಮಂದಾರ್ತಿಯ ಒಂದು ಮೇಳದಲ್ಲಿ ನಾನು ಭಾಗವಹಿಸಿದ್ದೆ. ಆಗ ಅಲ್ಲಿಯ ಕಲಾವಿದರು ಸಾಧ್ಯವಾದರೆ ಮುಂದಿನ ಆಟಗಳಿಗೂ ಬನ್ನಿ ಅಂತ ಕರೆದಿದ್ದರೂ ಆಗ ಬಿಡುವಿಲ್ಲದ ಕಾರಣ ಈಗ ಸಮಯ ಸಿಕ್ಕಿತ್ತು. ಮಂದಾರ್ತಿ ನಾಲ್ಕನೇ(ಡಿ)ಮೇಳದಲ್ಲಿ ಚಂಡೆ ಬಾರಿಸುವುದೆಂದು ಮೊದಲೇ ತೀರ್ಮಾನಿಸಿಯಾಗಿತ್ತು.

ಮೊದಲ ಟ್ರಿಪ್ಪಲ್ಲಿ ನಮ್ಮ ವಾಹನಕ್ಕೆ ಸ್ಥಳ ಸಿಗಲಿಲ್ಲ. ಇದರಿಂದ ಒಂದು ತಾಸು ಅಲ್ಲೇ ಕಳೆಯಬೇಕಾಯಿತು. ಮೂರುದಿನಗಳ ತಿರುಗಾಟವೆಂದು ಮೊದಲೇ ತೀರ್ಮಾನವಾಗಿತ್ತು.ಯಾವುದೇ ಕಾರಣಕ್ಕೂ ೧೭ ರ ಮಧ್ಯಾಹ್ನ ಮನೆಯಲ್ಲಿರಬೇಕಾದ ಅನಿವಾರ್ಯತೆ ಇಬ್ಬರಿಗೂ ಇತ್ತು. ಆದರೆ ಈ ಮೂರು ದಿವಸ ಉಳಿಯುವುದು ಎಲ್ಲಿ ಎಂಬ ತಲೆಬಿಸಿ ಇತ್ತು. ಅದನ್ನೇ ಆಲೋಚನೆ ಮಾಡುತ್ತಾ ಲಾಂಚ್ ದಾಟಿ ದಡ ಸೇರಿದಾಗ ಸಂಜೆ ಐದೂ ಕಾಲಾಗಿತ್ತು.

ಸಮೀಪದ ನಿಟ್ಟೂರಿನಲ್ಲಿ ಒಂದು ಚಾ ಕುಡಿದು ಕೊಲ್ಲೂರು ಘಾಟಿ ಇಳಿದ ನಂತರ ಮೇಳದ ಭಾಗವತರಾದ ಕೆ.ಪಿ.ಹೆಗಡೆಯವರಿಗೆ ಫೋನ್ ಮಾಡಿ ಇವತ್ತಿನ ಆಟ ಎಲ್ಲಿ? ಎಂದು ಕೇಳಿದಾಗ ಸೀದಾ ತಮ್ಮ ಮನೆಗೆ ಊಟಕ್ಕೆ ಬರಬೇಕು ಮತ್ತು ೨ ದಿವಸ ಇಲ್ಲೇ ವಸತಿ ಎಂದು ಹುಕುಂ ಬಂತು. ಮರು ಮಾತಾಡದೇ ಕಾರನ್ನು ಕೋಟದತ್ತ ತಿರುಗಿಸಿದೆ. ಕುಂದಾಪುರದಲ್ಲಿ ಕಾರಿಗೆ ಹೊಟ್ಟೆ ತುಂಬಿಸಿಕೊಂಡು ಕೋಟದತ್ತ ಹೊರಡುವಾಗ ರಾತ್ರಿ ಎಂಟಾಗಿತ್ತು.

ವಿಚಿತ್ರ ಎಂದರೇ ನಾಲ್ಕುಪಥದ ಹೈವೇ ನಿರ್ಮಾಣವಾಗುತಿದ್ದ ರಸ್ತೆಯನ್ನು ಕಂಡರೇ ನನಗೇ ತಲೆಬಿಸಿಯಾಯಿತು. ಒಂದು ಕಾಲದಲ್ಲಿ ಮನೆಯಂಗಳದಂತೆ ಇಲ್ಲಿನ ರಸ್ತೆಗಳಲ್ಲಿ ತಿರುಗುತ್ತಿದ್ದ ನನಗೆ ಈಗಿನ ರಸ್ತೆ ಕಂಡು ಫುಲ್ ಕನ್ಫ್ಯೂಸ್ ಆಗಿ ಹೋಯಿತು. ನಿಧಾನವಾಗಿ ಚಲಿಸುತ್ತಾ ರಸ್ತೆ ಪಕ್ಕದ ಅಂಗಡಿಯ ಬೋರ್ಡ್ ಗಳಲ್ಲಿ ಬರೆದಿರುವ ಊರ ಹೆಸರು ಹುಡುಕುತ್ತಾ ಮುಂದೆ ಸಾಗುತ್ತಾ ಹತಾಷನಾಗಿ ಕೋಟ ಬಹುಷಃ ದಾಟಿ ಹೋಯಿತು ಎನ್ನುತ್ತಿರುವಾಗ ಅರುಣ ಒಂದು ಅಂಗಡಿಯ ಬೋರ್ಡ್ ನೋಡಿ " ಏ ಇದು ತೆಕ್ಕಟ್ಟೆಯಾ ಇನ್ನು ಮುಂದಿದ್ದು ಹೊಡಿ" ಅಂದ. ಅಂತು ಇಂತು ಭಾಗವತರ ಮನೆಗೆ ಬಂದು ಸೇರಿದಾಗ ರಾತ್ರಿ ಎಂಟೂವರೆಯಾಗಿತ್ತು. ೧೨ ಕಿ.ಮಿಗೆ ಅರ್ಧಗಂಟೆ ಬೇಕಾಯಿತು.

ಊಟ ಮುಗಿಸಿ ಆಗಲೇ ಅವಸರದಿಂದ ಹೊರಟಿದ್ದ ಭಾಗವತರು "ನಿಂಗ ಊಟ ಮಾಡ್ಕ್ಯಂಡ್ ಬನ್ನಿ ಯಾನು ಮುಂದೆ ಹೋಗಿರ್ತಿ" ಎಂದರು. ಅರುಣ ತನ್ನ ಎಂದಿನ ಶೈಲಿಯಲ್ಲಿ "ತಡಿಯ ಭಾವ ಅಲ್ಲಿ ಹೋಗಿ ಮಲಕ್ಯಂಬುದು ಸೈಯಲಾ... ಕಾರಗೇ ಒಟ್ಟಿಗೇ ಹೋಪನ ತಡಿ ಏನ್ ಅವಸರ ನಿಂಗೆ ಆಟ ಇಪ್ಪುದು ಇಲ್ಲಿಂದ ೫ ಕಿಲೋಮೀಟರ್ ದೂರದಗೆ ಅಲ್ದನಾ?" ಎಂದು ತಡೆದು ನಿಲ್ಲಿಸಿದ.

ಸುಮಾರು ಐವತ್ಮೂರು ವರ್ಷ ಪ್ರಾಯದ, ಕಳೆದ ಮೂವತ್ತೈದು ವರ್ಷಗಳಿಂದ ಭಾಗವತಿಕೆ ಮಾಡುತ್ತಿರುವ,ಮೇಳದ ಮುಖ್ಯ ಭಾಗವತರಾದ, ೨೦೦ ಕ್ಕೂ ಹೆಚ್ಚು ಭಾಗವತರನ್ನು ತಯಾರು ಮಾಡಿದ ಗುರುವೊಬ್ಬ ಪ್ರತೀ ಆಟದಲ್ಲೂ ರಾತ್ರಿ ಎಂಟೂವರೆಗೆ ಚೌಕಿಯಲ್ಲಿ ಇರುತ್ತಾನೆಂದರೆ ಕಲೆಯ ಬಗ್ಗೆ ಪ್ರೀತಿ, ನಿಷ್ಠೆಯಲ್ಲದೇ ಇನ್ನೇನು?

ಊಟ ಮುಗಿಸಿ ಕವಳ ಹಾಕುವಾಗ ಉದಯವಾಣಿ ಪೇಪರ್ ತಿರುಗಿಸಿದರೇ ಅಮೃತೇಶ್ವರೀ ಮೇಳದ ಆಟ ಕೋಟದಲ್ಲಿತ್ತು, ಅಲ್ಲಿಂದ ಮೂರು ವರೆ ಕಿಮಿ ಉಪ್ಲಾಡಿಯಲ್ಲಿ ಮಂದಾರ್ತಿ ಎರಡನೇ ಮೇಳದ ಆಟ. ನಮ್ಮ ನಾಲ್ಕನೇ ಮೇಳದ ಆಟ ಕೋಟೇಶ್ವರದಲ್ಲಿತ್ತು, ಅಲ್ಲೇ ಪಕ್ಕದಲ್ಲಿ ಗೋಳಿಗರಡಿ ಮೇಳದ್ದು, ಅಲ್ಲಿಂದ ಒಂದು ಕಿಮಿ ದೂರದಲ್ಲಿ ಐದನೇ ಮೇಳದ ಆಟ. ತಲೆ ಗಿರ್ರಂತ ತಿರುಗಿತು... ಏಳೆಂಟು ಕಿಮಿ ವ್ಯಾಪ್ತಿಯಲ್ಲಿ ಐದಾರು ಮೇಳಗಳ ಆಟವಾದರೆ ನೋಡಲು ಜನ ಎಲ್ಲಿಂದ ಬರಬೇಕು!!!! ????

ಒಂಬತ್ತೂ ವರೆಗೆ ಮನೆಯಿಂದ ಹೊರಟು ಹತ್ತು ನಿಮಿಷದಲ್ಲಿ ಕೋಟೇಶ್ವರದ ಆಟದ ಚೌಕಿಗೆ ಬಂದು ತಲಿಪಿದೆವು. ನೋಡಿದರೆ "ಕ್ಷೇತ್ರ ಮಹಾತ್ಮೆ" ಪ್ರಸಂಗ. ಭಾಗವತರನ್ನು ಬಿಟ್ಟು ಸೀದಾ ತಿರುಗಿ ಕೋಟದ ಅಮೃತೇಶ್ವರೀ ಮೇಳಕ್ಕೆ ಬಂದರೆ ಅಲ್ಲಿ ಹೊಸಪ್ರಸಂಗ 'ನಕ್ಷತ್ರ ನಾಗಿಣಿ'. ಥತ್ ಇದೊಳ್ಳೆ ಗ್ರಾಚಾರವಲೋ ಅಂತ ಚೌಕಿ ಗಣಪತಿಗೆ ವಂದಿಸಿ ಪ್ರಸಾದ ತೆಗೆದುಕೊಂಡು ಹೊರಡುವಷ್ಟರಲ್ಲಿ ಚಿಟ್ಟಾಣಿ ನರಸಿಂಹ ಧುತ್ತೆಂದು ಎದುರಾದ. "ಏ ಅಪ್ಪೀ ಏನಾ ಈ ಕಡಿಗೆ?" ಎಂದು ಎಂದಿನ ಹಾಸ್ಯಭರಿತ ದಾಟಿಯಲ್ಲೇ ಕೇಳಿದಾಗ.. ನಿನ್ನ ವೇಷ ನೋಡಲೇ ಬಂದ್ನೋ ಮಾರಾಯಾ ಎಂದೆ. ಖಳನಾಯಕನ ಮುಂಡಾಸ್ಸು ವೇಷದಲ್ಲಿ ರಂಗಕ್ಕೆ ಹೊರಡಲು ರೆಡಿಯಾಗಿದ್ದ ನರಸಿಂಹ "ಹಂಗಾರೆ ಆಟ ನೋಡಿ" ಎಂದು ರಂಗವೇರಿದ. ಬಯಲಾಟದ ವೇಷಗಳಿಗೆ ಹೇಳಿ ಮಾಡಿಸಿದ ಅವನ ಅಂಗ ಚಲನೆ, ವಿಶಿಷ್ಟ ಕುಣಿತಗಳು, ಅಪ್ಪನ ತರದ್ದೇ ಮಾತು ಎಲ್ಲವೂ ನೋಡುಗರಿಗೆ (ವಿಮರ್ಶಾತ್ಮಕವಾಗಿ ಅಲ್ಲ) ಒಂದು ರೀತಿಯ ಸಂತೋಷವನ್ನು ಕೊಡುತ್ತವೆ. ಅರ್ಧ ಗಂಟೆಯ ನಂತರ ಪುನಃ ಚೌಕಿಗೆ ಹೋದಾಗ ಹಿರಿಯ ಕಲಾವಿದ ಐರೋಡಿ ಗೋವಿಂದಪ್ಪನವರು ಸಿಕ್ಕಿದರು. ನನಗೆ ಅವರು ಪರಿಚಯದವರಲ್ಲದಿದ್ದರೂ ಅರುಣನಿಗೆ ಅವರು ಆತ್ಮೀಯರು. ಅವರಿಬ್ಬರೂ ಮಾತುಕಥೆಯಾಡುತಿದ್ದಾಗ ಭಟ್ಟರು ಕರೆದು ಮತ್ತೊಂದಿಷ್ಟು ಪಂಚಕಜ್ಜಾಯ ಪ್ರಸಾದ ಕೊಟ್ಟರು. ನಿದಾನ ಹಿಂದುಗಡೆ ಹೋಗಿ ಮಲಗಿದ್ದ ಮಹಾಬಲ ಗೌಡನನ್ನು ಎಬ್ಬಿಸಿ(ಮದ್ದಲೆವಾದಕರು) ಐದು ನಿಮಿಷ ಮಾತಾಡಿಸಿ ಮಂದಾರ್ತಿ ಎರಡನೇ ಮೇಳದ ಆಟ ನೋಡಲು ಉಪ್ಲಾಡಿಯತ್ತ ಹೊರಟೆವು. ಅಲ್ಲಿಂದ ೪-೫ ಕಿಮಿ ಅಷ್ಟೆ.

ಈ ವರ್ಷ ಘಟಾನುಘಟಿ ಕಲಾವಿದರನ್ನೊಳಗೊಂಡ ಎರಡನೇ ಮೇಳದ ಪ್ರಸಂಗ ಚಕ್ರಚಂಡಿಕೆ. ಆಜಾನುಬಾಹು ಕಲಾವಿದ ನರಾಡಿ ಭೋಜರಾಜ ಶೆಟ್ಟರ ಘಟೋತ್ಕಜ, ಹಿರಿಯ ಸ್ತ್ರೀವೇಶಧಾರಿ ಹೊಸಂಗಡಿ ರಾಜು ಶೆಟ್ಟರ ಕಾಮಕಟನ್ಕಟಿ, ಹಾರಾಡಿ ಸರ್ವ ಗಾಣಿಗರ ಭಗದತ್ತ, ಚಂದ್ರ ಕುಲಾಲರ ಹಾಸ್ಯ. ನಾವಿದ್ದ ಸುಮಾರು ಎರಡು ತಾಸುಗಳು ಈ ನಾಲ್ಕು ಪಾತ್ರಗಳು ಮಾತ್ರ ರಂಗದಲ್ಲಿತ್ತು. ಅದರೂ ಮೂರು ಘಟಗಳನ್ನು ಒಂದೇ ಸಲ ಕಂಡ ಸಮಾಧಾನವಾಯಿತಾದರೂ ಬಹು ನಿರೀಕ್ಷೆ, ಮತ್ತು ಆಸೆಪಟ್ಟು ನೋಡಬೇಕೆಂದಿದ್ದ ಭಾಗವತ ರಾಮಕೃಷ್ಣ ಹೆಗಡೆ ರಜೆ ಮಾಡಿದ್ದು ನಿರಾಸೆ, ಬೇಸರವುಂಟಾಯಿರು. ನಾವಿದ್ದ ಮೂರು ರಾತ್ರಿಯು ಆತ ರಜೆ ಮಾಡಿದ್ದು ಒಂದು ರೀತಿಯ ಸಿಟ್ಟನ್ನೂ ತರಿಸಿದ್ದು ಸುಳ್ಳಲ್ಲ. ಆದಿನ ನಗರ ಸುಬ್ರಹ್ಮಣ್ಯ ಆಚಾರ್ ಭಾಗವತಿಕೆ ಬಹಳ ಹಿಡಿಸಿತು.

ಬರ್ಬರೀಕನ ಪಾತ್ರಕ್ಕೆ ರೆಡಿಯಾಗುತ್ತಿದ್ದ ಸುಂದರ ಕಲಾವಿದ ಪ್ರಸನ್ನ ಶೆಟ್ಟಿಗಾರ್ ಮತ್ತು ಸ್ತ್ರೀವೇಷದಾರಿ ಶ್ರೀಧರ ಗಾಣಿಗ, ಹಿಮ್ಮೇಳದ ಆತ್ಮೀಯ ಎನ್.ಜಿ.ಹೆಗಡೆ ಮತ್ತು ಪ್ರಶಾಂತ ಭಂಡಾರಿಯವರನ್ನು ಮಾತನಾಡಿಸಿಕೊಂಡು ರಾತ್ರಿ ಒಂದು ಗಂಟೆಗೆ ಪುನಃ ಕೋಟದತ್ತ ಹೊರಟೆವು.. ಐದೇ ನಿಮಿಷದ ಹಾದಿ.

ರಾತ್ರಿ ಒಂದು ರೋಚಕ ಘಟನೆ ನಡೆದಿತ್ತು. ಕೋಟೇಶ್ವರದಿಂದ ಬಂದ ನಾವು ಅಮೃತೇಶ್ವರೀ ಮೇಳದ ಆಟ ಎಲ್ಲಿ ಎಂದು ಹೂವಿನ ಅಂಗಡಿಯವರಲ್ಲಿ ಕೇಳಿದ್ದೆವು ಆಗ ಸಮಯ ಸುಮಾರು ಹತ್ತು ಗಂಟೆ. ಓ ಅಲ್ಲಿ ಗಿಳಿಯಾರ್ ಸಾಲಿ ಹಿಂದೆ ಒಂದು ರೋಡ್ ಹೋಯ್ತ್ ... ಆ ರೋಡಂಗೆ ಹೋಯ್ನಿ ಅಲ್ಲೇ ಆಂಟು ಅಂತ ಅಂಗಡಿಯ ಯಜಮಾನರು ಹೇಳಿದ್ದರು. ಆದರೆ ಅಲ್ಲಿ ಹೋಗಿ ನೋಡಿದಾಗ(ಸುಮಾರು ೧ ಕಿಮಿ) ಯಾವ ಆಟವೂ ಕಾಣಲಿಲ್ಲ.. ಆದರೆ ದೂರದಲ್ಲಿ ಮೇಳದ ಲೈಟ್ ತೋರುತ್ತಿತ್ತು. ನಡುವೆ ವಿಶಾಲವಾದ ಗದ್ದೆ, ಅಲ್ಲಿಗೆ ಕಾರಿನಲ್ಲಿ ಹೋಗುವುದು ಹೇಗೆ ಎಂದು ತಿಳಿಯಲಿಲ್ಲ. ಪುನಃ ಪೇಟೆಗೆ ಬಂದು ಅದೇ ಯಜಮಾನರಲ್ಲಿ ವಿಷಯ ಹೇಳಿದೆವು. ಸ್ವಲ್ಪ ತಲೆಬಿಸಿ ಮಾಡಿಕೊಂಡ ಅವರು ಏನೋ ನೆನಪು ಮಾಡಿಕೊಂಡವರಂತೆ " ಹೋಯ್ ಇವತ್ತೆ ಸನಿವಾರ ಮಾರ್ರೆ.. ಇವತ್ತೆ ಇಲ್ಲೆ ಸನಿ ದೇವಸ್ಥಾನದ ಗೆದ್ದೆಲಿ ಆಟ ಓ ಅಲ್ ತೋರ್ತಲೇ ಅದೇ ದಾರ್ಯಂಗೆ ಹೋಯ್ಕು, ನಿನ್ನೆ ಗಿಳಿಯಾರ್ ಸಾಲಿ ಹಿಂದೆ ಇದ್ದೀತ್, ನಾಳೆ ಹ್ವಾಯ್ ಇಲ್ಲೆ ಹಿಂದುಗಡೆ ಕಾಣಿ" ಎಂದಾಗ ನಗಬೆಕೋ ಅಳಬೇಕೋ ಗೊತ್ತಾಗಲಿಲ್ಲ!.

ಸರಿಯಾಗಿ ಒಂದು ಗಂಟೆಗೆ ಐರೋಡಿಯವರ ಪ್ರವೇಶವಾಗಿತ್ತು. ಅದೇ ಸಮಯಕ್ಕೆ ಹಿರಿಯ ಭಾಗವತ ಹಿರೇಮಕ್ಕಿ ವಿಷ್ಣು ಹೆಗಡೆಯವರು ಭಾಗವತಿಕೆಗೆ ಬಂದು ಕುಳಿತರು. ಸುಮಾರು ಒಂದುವರೆ ತಾಸು ಆಟ ನೋಡಿದೆವು. ಹೊಸ ಪ್ರಸಂಗವೇ ಆದರೂ ಕೂಡಾ ಎಲ್ಲಾ ಪದ್ಯಗಳನ್ನೂ ಹಳೇಮಟ್ಟಿನಲ್ಲೇ ಹಾಡಿದ ಭಾಗವತಿಕೆ ಅಮೋಘವಾಗಿತ್ತು. ಈ ಭಾಗವತಿಕೆಯ ಗುಂಗಲ್ಲೇ ಕೋಟೇಶ್ವರದತ್ತ ಹೊರಟು ಹತ್ತು ನಿಮಿಶದಲ್ಲಿ ಸೇರಿ ಮತ್ತೊಂದು ಐದು ನಿಮಿಷದಲ್ಲಿ ರಂಗಸ್ಥಳದಲ್ಲಿದ್ದೆ. ನಾಲ್ಕನೇ ಮೇಳದ ಮುಮ್ಮೇಳದಲ್ಲಿ ಹೇಳಿಕೊಳ್ಳುವಂತಹ ಕಲಾವಿದರು ಯಾರು ಇಲ್ಲದಿದ್ದರೂ, ಭಾಗವತ ಕೆ.ಪಿ.ಹೆಗಡೆ ಮತ್ತು ಸ್ತ್ರೀವೇಷಧಾರಿಗಳಿಬ್ಬರೇ ಪ್ರಮುಖ ಆಕರ್ಷಣೆ.

ಭಾಗವತರ ಸ್ವರ ಈ ವರ್ಷ ಅತ್ಯಮೋಘ. "ಐದು ತಿಂಗಳಲ್ಲಿ ಒಂದು ದಿನವೂ ಸ್ವರ ಕೈಕೊಡಲಿಲ್ಲ, ಕೇವಲ ಎರಡೇ ದಿನ ರಜೆ ಮಾಡಿದ್ದಿ" ಎಂದು ಕವಳ ತುಂಬಿದ ಬಾಯಲ್ಲಿ ಹೇಳಿದರು. ಅಂತೂ ಮೊದಲ ದಿನದ ಆಟ ಮುಗಿಯಿತು.ಒಟ್ಟು ಮೂರು ಆಟ ನೋಡಿದಂತಾಯಿತು.