Wednesday, May 9, 2012

ಬಯಲಾಟ - ತಿರುಗಾಟ (ಮೂರು ರಾತ್ರಿ, ಏಳು ಆಟ).

ಮೊದಲನೇ ದಿನ  : April 14,2012

ಬಯಲಾಟ ನೋಡದೇ ಹಲವು ವರ್ಷಗಳೇ ಆಗಿದ್ದವು. ಪ್ರತೀ ಸಲ ಹೊರಡಬೇಕೆಂದಾಗ ಏನಾದರೂ ವಿಘ್ನ ಎದುರಾಗುತಿತ್ತು. ಏನಾದರಾಗಲಿ ಈ ಬಾರೀ ಹೋಗಲೇಬೇಕೆಂದು ತೀರ್ಮಾನಿಸಿ ಮಿತ್ರ ಕ್ಯಾಸನೂರು ಅರುಣನನ್ನು ಕಾರಿನಲ್ಲಿ ಹತ್ತಿಸಿಕೊಂಡು ಹಸಿರುಮಕ್ಕಿ ಲಾಂಚ್ ಹತ್ರ ಬಂದಾಗ ಮಧ್ಯಾಹ್ನ ಮೂರೂ ಮುಕ್ಕಾಲು, ಏಪ್ರಿಲ್ ೧೪,೨೦೧೨ ರ ಶನಿವಾರ. ಯಾರಿಗೂ ಹೇಳದೇ ನಾವಿಬ್ಬರೇ ಹೊರಟಿದ್ದೆವು. ನಮ್ಮೊಟ್ಟಿಗೆ ಇನ್ನೂ ಕೆಲವರು ಬರಲು ತಯಾರಿದ್ದರೂ ಕೂಡಾ, ಎಲ್ಲರೂ ಸೇರಿದರೆ ಆಟ ನೋಡುವ ಬದಲು ಇತರೇ ಕಾರ್ಯಕ್ರಮಗಳ ಭರಾಟೆಗಳೇ ಹೆಚ್ಚಾಗುವ ಭಯವಿದ್ದುದರಿಂದ ಯಾರನ್ನೂ ಸಂಪರ್ಕಿಸದೇ ಒಂದು ರೀತಿ ಕಳ್ಳತನದಿಂದಲೇ ಎಲ್ಲರಿಂದ ತಪ್ಪಿಸುಕೊಂಡು ಲಾಂಚ್ ಹತ್ರ ಬಂದರೆ ಅಲ್ಲಿ ವಾಹನಗಳ ಸಂತೆ.

ಮಾರ್ಚ್ ತಿಂಗಳಲ್ಲಿ ಸಾಗರದ ಕಡೆ ತಿರುಗಾಟದಲ್ಲಿದ್ದ ಮಂದಾರ್ತಿಯ ಒಂದು ಮೇಳದಲ್ಲಿ ನಾನು ಭಾಗವಹಿಸಿದ್ದೆ. ಆಗ ಅಲ್ಲಿಯ ಕಲಾವಿದರು ಸಾಧ್ಯವಾದರೆ ಮುಂದಿನ ಆಟಗಳಿಗೂ ಬನ್ನಿ ಅಂತ ಕರೆದಿದ್ದರೂ ಆಗ ಬಿಡುವಿಲ್ಲದ ಕಾರಣ ಈಗ ಸಮಯ ಸಿಕ್ಕಿತ್ತು. ಮಂದಾರ್ತಿ ನಾಲ್ಕನೇ(ಡಿ)ಮೇಳದಲ್ಲಿ ಚಂಡೆ ಬಾರಿಸುವುದೆಂದು ಮೊದಲೇ ತೀರ್ಮಾನಿಸಿಯಾಗಿತ್ತು.

ಮೊದಲ ಟ್ರಿಪ್ಪಲ್ಲಿ ನಮ್ಮ ವಾಹನಕ್ಕೆ ಸ್ಥಳ ಸಿಗಲಿಲ್ಲ. ಇದರಿಂದ ಒಂದು ತಾಸು ಅಲ್ಲೇ ಕಳೆಯಬೇಕಾಯಿತು. ಮೂರುದಿನಗಳ ತಿರುಗಾಟವೆಂದು ಮೊದಲೇ ತೀರ್ಮಾನವಾಗಿತ್ತು.ಯಾವುದೇ ಕಾರಣಕ್ಕೂ ೧೭ ರ ಮಧ್ಯಾಹ್ನ ಮನೆಯಲ್ಲಿರಬೇಕಾದ ಅನಿವಾರ್ಯತೆ ಇಬ್ಬರಿಗೂ ಇತ್ತು. ಆದರೆ ಈ ಮೂರು ದಿವಸ ಉಳಿಯುವುದು ಎಲ್ಲಿ ಎಂಬ ತಲೆಬಿಸಿ ಇತ್ತು. ಅದನ್ನೇ ಆಲೋಚನೆ ಮಾಡುತ್ತಾ ಲಾಂಚ್ ದಾಟಿ ದಡ ಸೇರಿದಾಗ ಸಂಜೆ ಐದೂ ಕಾಲಾಗಿತ್ತು.

ಸಮೀಪದ ನಿಟ್ಟೂರಿನಲ್ಲಿ ಒಂದು ಚಾ ಕುಡಿದು ಕೊಲ್ಲೂರು ಘಾಟಿ ಇಳಿದ ನಂತರ ಮೇಳದ ಭಾಗವತರಾದ ಕೆ.ಪಿ.ಹೆಗಡೆಯವರಿಗೆ ಫೋನ್ ಮಾಡಿ ಇವತ್ತಿನ ಆಟ ಎಲ್ಲಿ? ಎಂದು ಕೇಳಿದಾಗ ಸೀದಾ ತಮ್ಮ ಮನೆಗೆ ಊಟಕ್ಕೆ ಬರಬೇಕು ಮತ್ತು ೨ ದಿವಸ ಇಲ್ಲೇ ವಸತಿ ಎಂದು ಹುಕುಂ ಬಂತು. ಮರು ಮಾತಾಡದೇ ಕಾರನ್ನು ಕೋಟದತ್ತ ತಿರುಗಿಸಿದೆ. ಕುಂದಾಪುರದಲ್ಲಿ ಕಾರಿಗೆ ಹೊಟ್ಟೆ ತುಂಬಿಸಿಕೊಂಡು ಕೋಟದತ್ತ ಹೊರಡುವಾಗ ರಾತ್ರಿ ಎಂಟಾಗಿತ್ತು.

ವಿಚಿತ್ರ ಎಂದರೇ ನಾಲ್ಕುಪಥದ ಹೈವೇ ನಿರ್ಮಾಣವಾಗುತಿದ್ದ ರಸ್ತೆಯನ್ನು ಕಂಡರೇ ನನಗೇ ತಲೆಬಿಸಿಯಾಯಿತು. ಒಂದು ಕಾಲದಲ್ಲಿ ಮನೆಯಂಗಳದಂತೆ ಇಲ್ಲಿನ ರಸ್ತೆಗಳಲ್ಲಿ ತಿರುಗುತ್ತಿದ್ದ ನನಗೆ ಈಗಿನ ರಸ್ತೆ ಕಂಡು ಫುಲ್ ಕನ್ಫ್ಯೂಸ್ ಆಗಿ ಹೋಯಿತು. ನಿಧಾನವಾಗಿ ಚಲಿಸುತ್ತಾ ರಸ್ತೆ ಪಕ್ಕದ ಅಂಗಡಿಯ ಬೋರ್ಡ್ ಗಳಲ್ಲಿ ಬರೆದಿರುವ ಊರ ಹೆಸರು ಹುಡುಕುತ್ತಾ ಮುಂದೆ ಸಾಗುತ್ತಾ ಹತಾಷನಾಗಿ ಕೋಟ ಬಹುಷಃ ದಾಟಿ ಹೋಯಿತು ಎನ್ನುತ್ತಿರುವಾಗ ಅರುಣ ಒಂದು ಅಂಗಡಿಯ ಬೋರ್ಡ್ ನೋಡಿ " ಏ ಇದು ತೆಕ್ಕಟ್ಟೆಯಾ ಇನ್ನು ಮುಂದಿದ್ದು ಹೊಡಿ" ಅಂದ. ಅಂತು ಇಂತು ಭಾಗವತರ ಮನೆಗೆ ಬಂದು ಸೇರಿದಾಗ ರಾತ್ರಿ ಎಂಟೂವರೆಯಾಗಿತ್ತು. ೧೨ ಕಿ.ಮಿಗೆ ಅರ್ಧಗಂಟೆ ಬೇಕಾಯಿತು.

ಊಟ ಮುಗಿಸಿ ಆಗಲೇ ಅವಸರದಿಂದ ಹೊರಟಿದ್ದ ಭಾಗವತರು "ನಿಂಗ ಊಟ ಮಾಡ್ಕ್ಯಂಡ್ ಬನ್ನಿ ಯಾನು ಮುಂದೆ ಹೋಗಿರ್ತಿ" ಎಂದರು. ಅರುಣ ತನ್ನ ಎಂದಿನ ಶೈಲಿಯಲ್ಲಿ "ತಡಿಯ ಭಾವ ಅಲ್ಲಿ ಹೋಗಿ ಮಲಕ್ಯಂಬುದು ಸೈಯಲಾ... ಕಾರಗೇ ಒಟ್ಟಿಗೇ ಹೋಪನ ತಡಿ ಏನ್ ಅವಸರ ನಿಂಗೆ ಆಟ ಇಪ್ಪುದು ಇಲ್ಲಿಂದ ೫ ಕಿಲೋಮೀಟರ್ ದೂರದಗೆ ಅಲ್ದನಾ?" ಎಂದು ತಡೆದು ನಿಲ್ಲಿಸಿದ.

ಸುಮಾರು ಐವತ್ಮೂರು ವರ್ಷ ಪ್ರಾಯದ, ಕಳೆದ ಮೂವತ್ತೈದು ವರ್ಷಗಳಿಂದ ಭಾಗವತಿಕೆ ಮಾಡುತ್ತಿರುವ,ಮೇಳದ ಮುಖ್ಯ ಭಾಗವತರಾದ, ೨೦೦ ಕ್ಕೂ ಹೆಚ್ಚು ಭಾಗವತರನ್ನು ತಯಾರು ಮಾಡಿದ ಗುರುವೊಬ್ಬ ಪ್ರತೀ ಆಟದಲ್ಲೂ ರಾತ್ರಿ ಎಂಟೂವರೆಗೆ ಚೌಕಿಯಲ್ಲಿ ಇರುತ್ತಾನೆಂದರೆ ಕಲೆಯ ಬಗ್ಗೆ ಪ್ರೀತಿ, ನಿಷ್ಠೆಯಲ್ಲದೇ ಇನ್ನೇನು?

ಊಟ ಮುಗಿಸಿ ಕವಳ ಹಾಕುವಾಗ ಉದಯವಾಣಿ ಪೇಪರ್ ತಿರುಗಿಸಿದರೇ ಅಮೃತೇಶ್ವರೀ ಮೇಳದ ಆಟ ಕೋಟದಲ್ಲಿತ್ತು, ಅಲ್ಲಿಂದ ಮೂರು ವರೆ ಕಿಮಿ ಉಪ್ಲಾಡಿಯಲ್ಲಿ ಮಂದಾರ್ತಿ ಎರಡನೇ ಮೇಳದ ಆಟ. ನಮ್ಮ ನಾಲ್ಕನೇ ಮೇಳದ ಆಟ ಕೋಟೇಶ್ವರದಲ್ಲಿತ್ತು, ಅಲ್ಲೇ ಪಕ್ಕದಲ್ಲಿ ಗೋಳಿಗರಡಿ ಮೇಳದ್ದು, ಅಲ್ಲಿಂದ ಒಂದು ಕಿಮಿ ದೂರದಲ್ಲಿ ಐದನೇ ಮೇಳದ ಆಟ. ತಲೆ ಗಿರ್ರಂತ ತಿರುಗಿತು... ಏಳೆಂಟು ಕಿಮಿ ವ್ಯಾಪ್ತಿಯಲ್ಲಿ ಐದಾರು ಮೇಳಗಳ ಆಟವಾದರೆ ನೋಡಲು ಜನ ಎಲ್ಲಿಂದ ಬರಬೇಕು!!!! ????

ಒಂಬತ್ತೂ ವರೆಗೆ ಮನೆಯಿಂದ ಹೊರಟು ಹತ್ತು ನಿಮಿಷದಲ್ಲಿ ಕೋಟೇಶ್ವರದ ಆಟದ ಚೌಕಿಗೆ ಬಂದು ತಲಿಪಿದೆವು. ನೋಡಿದರೆ "ಕ್ಷೇತ್ರ ಮಹಾತ್ಮೆ" ಪ್ರಸಂಗ. ಭಾಗವತರನ್ನು ಬಿಟ್ಟು ಸೀದಾ ತಿರುಗಿ ಕೋಟದ ಅಮೃತೇಶ್ವರೀ ಮೇಳಕ್ಕೆ ಬಂದರೆ ಅಲ್ಲಿ ಹೊಸಪ್ರಸಂಗ 'ನಕ್ಷತ್ರ ನಾಗಿಣಿ'. ಥತ್ ಇದೊಳ್ಳೆ ಗ್ರಾಚಾರವಲೋ ಅಂತ ಚೌಕಿ ಗಣಪತಿಗೆ ವಂದಿಸಿ ಪ್ರಸಾದ ತೆಗೆದುಕೊಂಡು ಹೊರಡುವಷ್ಟರಲ್ಲಿ ಚಿಟ್ಟಾಣಿ ನರಸಿಂಹ ಧುತ್ತೆಂದು ಎದುರಾದ. "ಏ ಅಪ್ಪೀ ಏನಾ ಈ ಕಡಿಗೆ?" ಎಂದು ಎಂದಿನ ಹಾಸ್ಯಭರಿತ ದಾಟಿಯಲ್ಲೇ ಕೇಳಿದಾಗ.. ನಿನ್ನ ವೇಷ ನೋಡಲೇ ಬಂದ್ನೋ ಮಾರಾಯಾ ಎಂದೆ. ಖಳನಾಯಕನ ಮುಂಡಾಸ್ಸು ವೇಷದಲ್ಲಿ ರಂಗಕ್ಕೆ ಹೊರಡಲು ರೆಡಿಯಾಗಿದ್ದ ನರಸಿಂಹ "ಹಂಗಾರೆ ಆಟ ನೋಡಿ" ಎಂದು ರಂಗವೇರಿದ. ಬಯಲಾಟದ ವೇಷಗಳಿಗೆ ಹೇಳಿ ಮಾಡಿಸಿದ ಅವನ ಅಂಗ ಚಲನೆ, ವಿಶಿಷ್ಟ ಕುಣಿತಗಳು, ಅಪ್ಪನ ತರದ್ದೇ ಮಾತು ಎಲ್ಲವೂ ನೋಡುಗರಿಗೆ (ವಿಮರ್ಶಾತ್ಮಕವಾಗಿ ಅಲ್ಲ) ಒಂದು ರೀತಿಯ ಸಂತೋಷವನ್ನು ಕೊಡುತ್ತವೆ. ಅರ್ಧ ಗಂಟೆಯ ನಂತರ ಪುನಃ ಚೌಕಿಗೆ ಹೋದಾಗ ಹಿರಿಯ ಕಲಾವಿದ ಐರೋಡಿ ಗೋವಿಂದಪ್ಪನವರು ಸಿಕ್ಕಿದರು. ನನಗೆ ಅವರು ಪರಿಚಯದವರಲ್ಲದಿದ್ದರೂ ಅರುಣನಿಗೆ ಅವರು ಆತ್ಮೀಯರು. ಅವರಿಬ್ಬರೂ ಮಾತುಕಥೆಯಾಡುತಿದ್ದಾಗ ಭಟ್ಟರು ಕರೆದು ಮತ್ತೊಂದಿಷ್ಟು ಪಂಚಕಜ್ಜಾಯ ಪ್ರಸಾದ ಕೊಟ್ಟರು. ನಿದಾನ ಹಿಂದುಗಡೆ ಹೋಗಿ ಮಲಗಿದ್ದ ಮಹಾಬಲ ಗೌಡನನ್ನು ಎಬ್ಬಿಸಿ(ಮದ್ದಲೆವಾದಕರು) ಐದು ನಿಮಿಷ ಮಾತಾಡಿಸಿ ಮಂದಾರ್ತಿ ಎರಡನೇ ಮೇಳದ ಆಟ ನೋಡಲು ಉಪ್ಲಾಡಿಯತ್ತ ಹೊರಟೆವು. ಅಲ್ಲಿಂದ ೪-೫ ಕಿಮಿ ಅಷ್ಟೆ.

ಈ ವರ್ಷ ಘಟಾನುಘಟಿ ಕಲಾವಿದರನ್ನೊಳಗೊಂಡ ಎರಡನೇ ಮೇಳದ ಪ್ರಸಂಗ ಚಕ್ರಚಂಡಿಕೆ. ಆಜಾನುಬಾಹು ಕಲಾವಿದ ನರಾಡಿ ಭೋಜರಾಜ ಶೆಟ್ಟರ ಘಟೋತ್ಕಜ, ಹಿರಿಯ ಸ್ತ್ರೀವೇಶಧಾರಿ ಹೊಸಂಗಡಿ ರಾಜು ಶೆಟ್ಟರ ಕಾಮಕಟನ್ಕಟಿ, ಹಾರಾಡಿ ಸರ್ವ ಗಾಣಿಗರ ಭಗದತ್ತ, ಚಂದ್ರ ಕುಲಾಲರ ಹಾಸ್ಯ. ನಾವಿದ್ದ ಸುಮಾರು ಎರಡು ತಾಸುಗಳು ಈ ನಾಲ್ಕು ಪಾತ್ರಗಳು ಮಾತ್ರ ರಂಗದಲ್ಲಿತ್ತು. ಅದರೂ ಮೂರು ಘಟಗಳನ್ನು ಒಂದೇ ಸಲ ಕಂಡ ಸಮಾಧಾನವಾಯಿತಾದರೂ ಬಹು ನಿರೀಕ್ಷೆ, ಮತ್ತು ಆಸೆಪಟ್ಟು ನೋಡಬೇಕೆಂದಿದ್ದ ಭಾಗವತ ರಾಮಕೃಷ್ಣ ಹೆಗಡೆ ರಜೆ ಮಾಡಿದ್ದು ನಿರಾಸೆ, ಬೇಸರವುಂಟಾಯಿರು. ನಾವಿದ್ದ ಮೂರು ರಾತ್ರಿಯು ಆತ ರಜೆ ಮಾಡಿದ್ದು ಒಂದು ರೀತಿಯ ಸಿಟ್ಟನ್ನೂ ತರಿಸಿದ್ದು ಸುಳ್ಳಲ್ಲ. ಆದಿನ ನಗರ ಸುಬ್ರಹ್ಮಣ್ಯ ಆಚಾರ್ ಭಾಗವತಿಕೆ ಬಹಳ ಹಿಡಿಸಿತು.

ಬರ್ಬರೀಕನ ಪಾತ್ರಕ್ಕೆ ರೆಡಿಯಾಗುತ್ತಿದ್ದ ಸುಂದರ ಕಲಾವಿದ ಪ್ರಸನ್ನ ಶೆಟ್ಟಿಗಾರ್ ಮತ್ತು ಸ್ತ್ರೀವೇಷದಾರಿ ಶ್ರೀಧರ ಗಾಣಿಗ, ಹಿಮ್ಮೇಳದ ಆತ್ಮೀಯ ಎನ್.ಜಿ.ಹೆಗಡೆ ಮತ್ತು ಪ್ರಶಾಂತ ಭಂಡಾರಿಯವರನ್ನು ಮಾತನಾಡಿಸಿಕೊಂಡು ರಾತ್ರಿ ಒಂದು ಗಂಟೆಗೆ ಪುನಃ ಕೋಟದತ್ತ ಹೊರಟೆವು.. ಐದೇ ನಿಮಿಷದ ಹಾದಿ.

ರಾತ್ರಿ ಒಂದು ರೋಚಕ ಘಟನೆ ನಡೆದಿತ್ತು. ಕೋಟೇಶ್ವರದಿಂದ ಬಂದ ನಾವು ಅಮೃತೇಶ್ವರೀ ಮೇಳದ ಆಟ ಎಲ್ಲಿ ಎಂದು ಹೂವಿನ ಅಂಗಡಿಯವರಲ್ಲಿ ಕೇಳಿದ್ದೆವು ಆಗ ಸಮಯ ಸುಮಾರು ಹತ್ತು ಗಂಟೆ. ಓ ಅಲ್ಲಿ ಗಿಳಿಯಾರ್ ಸಾಲಿ ಹಿಂದೆ ಒಂದು ರೋಡ್ ಹೋಯ್ತ್ ... ಆ ರೋಡಂಗೆ ಹೋಯ್ನಿ ಅಲ್ಲೇ ಆಂಟು ಅಂತ ಅಂಗಡಿಯ ಯಜಮಾನರು ಹೇಳಿದ್ದರು. ಆದರೆ ಅಲ್ಲಿ ಹೋಗಿ ನೋಡಿದಾಗ(ಸುಮಾರು ೧ ಕಿಮಿ) ಯಾವ ಆಟವೂ ಕಾಣಲಿಲ್ಲ.. ಆದರೆ ದೂರದಲ್ಲಿ ಮೇಳದ ಲೈಟ್ ತೋರುತ್ತಿತ್ತು. ನಡುವೆ ವಿಶಾಲವಾದ ಗದ್ದೆ, ಅಲ್ಲಿಗೆ ಕಾರಿನಲ್ಲಿ ಹೋಗುವುದು ಹೇಗೆ ಎಂದು ತಿಳಿಯಲಿಲ್ಲ. ಪುನಃ ಪೇಟೆಗೆ ಬಂದು ಅದೇ ಯಜಮಾನರಲ್ಲಿ ವಿಷಯ ಹೇಳಿದೆವು. ಸ್ವಲ್ಪ ತಲೆಬಿಸಿ ಮಾಡಿಕೊಂಡ ಅವರು ಏನೋ ನೆನಪು ಮಾಡಿಕೊಂಡವರಂತೆ " ಹೋಯ್ ಇವತ್ತೆ ಸನಿವಾರ ಮಾರ್ರೆ.. ಇವತ್ತೆ ಇಲ್ಲೆ ಸನಿ ದೇವಸ್ಥಾನದ ಗೆದ್ದೆಲಿ ಆಟ ಓ ಅಲ್ ತೋರ್ತಲೇ ಅದೇ ದಾರ್ಯಂಗೆ ಹೋಯ್ಕು, ನಿನ್ನೆ ಗಿಳಿಯಾರ್ ಸಾಲಿ ಹಿಂದೆ ಇದ್ದೀತ್, ನಾಳೆ ಹ್ವಾಯ್ ಇಲ್ಲೆ ಹಿಂದುಗಡೆ ಕಾಣಿ" ಎಂದಾಗ ನಗಬೆಕೋ ಅಳಬೇಕೋ ಗೊತ್ತಾಗಲಿಲ್ಲ!.

ಸರಿಯಾಗಿ ಒಂದು ಗಂಟೆಗೆ ಐರೋಡಿಯವರ ಪ್ರವೇಶವಾಗಿತ್ತು. ಅದೇ ಸಮಯಕ್ಕೆ ಹಿರಿಯ ಭಾಗವತ ಹಿರೇಮಕ್ಕಿ ವಿಷ್ಣು ಹೆಗಡೆಯವರು ಭಾಗವತಿಕೆಗೆ ಬಂದು ಕುಳಿತರು. ಸುಮಾರು ಒಂದುವರೆ ತಾಸು ಆಟ ನೋಡಿದೆವು. ಹೊಸ ಪ್ರಸಂಗವೇ ಆದರೂ ಕೂಡಾ ಎಲ್ಲಾ ಪದ್ಯಗಳನ್ನೂ ಹಳೇಮಟ್ಟಿನಲ್ಲೇ ಹಾಡಿದ ಭಾಗವತಿಕೆ ಅಮೋಘವಾಗಿತ್ತು. ಈ ಭಾಗವತಿಕೆಯ ಗುಂಗಲ್ಲೇ ಕೋಟೇಶ್ವರದತ್ತ ಹೊರಟು ಹತ್ತು ನಿಮಿಶದಲ್ಲಿ ಸೇರಿ ಮತ್ತೊಂದು ಐದು ನಿಮಿಷದಲ್ಲಿ ರಂಗಸ್ಥಳದಲ್ಲಿದ್ದೆ. ನಾಲ್ಕನೇ ಮೇಳದ ಮುಮ್ಮೇಳದಲ್ಲಿ ಹೇಳಿಕೊಳ್ಳುವಂತಹ ಕಲಾವಿದರು ಯಾರು ಇಲ್ಲದಿದ್ದರೂ, ಭಾಗವತ ಕೆ.ಪಿ.ಹೆಗಡೆ ಮತ್ತು ಸ್ತ್ರೀವೇಷಧಾರಿಗಳಿಬ್ಬರೇ ಪ್ರಮುಖ ಆಕರ್ಷಣೆ.

ಭಾಗವತರ ಸ್ವರ ಈ ವರ್ಷ ಅತ್ಯಮೋಘ. "ಐದು ತಿಂಗಳಲ್ಲಿ ಒಂದು ದಿನವೂ ಸ್ವರ ಕೈಕೊಡಲಿಲ್ಲ, ಕೇವಲ ಎರಡೇ ದಿನ ರಜೆ ಮಾಡಿದ್ದಿ" ಎಂದು ಕವಳ ತುಂಬಿದ ಬಾಯಲ್ಲಿ ಹೇಳಿದರು. ಅಂತೂ ಮೊದಲ ದಿನದ ಆಟ ಮುಗಿಯಿತು.ಒಟ್ಟು ಮೂರು ಆಟ ನೋಡಿದಂತಾಯಿತು.

Wednesday, December 15, 2010

ನಾ ಕಂಡ ನರಕಾಸುರ

ಮಾವನ ಮನೆಯಲ್ಲಿ ದೀಪಾವಳಿ ಹಬ್ಬ ಮುಗಿಸಿ ಇನ್ನೇನು ಮನೆಗೆ ಹೊರಡಬೇಕು ಎಂದು ಗಂಟು ಕಟ್ಟುತ್ತಿರುವಾಗ ಅಲ್ಲಿಗೆ ಬಂದ ಸಂಭಂಧಿಕರೊಬ್ಬರು ಇವತ್ತು ಸಂಜೆ ’ಹಂಸಗಾರು ದೇವಸ್ಥಾನದಲ್ಲಿ’ ಒಳ್ಳೇ ಆಟ ಇದ್ದು ಅಂತ ವಿವರ ಹೇಳಿದಾಗ ಕಿವಿ ನೆಟ್ಟಗಾಯಿತು. ಊರು ಕಡೆ ಆಟ ನೋಡದೇ ಸುಮಾರು ೪-೫ ವರ್ಷಗಳೇ ಕಳೆದಿತ್ತು. ನನ್ನ ಸಣ್ಣ ಮಾವನವರು ’ಏ ಇವತ್ತು ಆಟ ನೋಡ್ಕ್ಯಂಡ್ ನಾಳೆ ಬೆಳಿಗೆ ಮನೆಗೆ ಹೋಗಲಕ್ಕ’ ಅಂದಾಗ ನನಗೇ ಖುಶಿಯೇ ಆದದ್ದು. ಸರಿ ಹೇಗೂ ವ್ಯಾನ್ ಇದ್ದುದ್ದರಿಂದ ಆಟದಲ್ಲಿ ಆಸಕ್ತಿಯಿಲ್ಲದ ಒಬ್ಬರನ್ನು ಮನೆ ಕಾವಲಿಗೆ ಬಿಟ್ಟು ಮನೆಯವರೆಲ್ಲರೂ ಹೊರಟೆವು. ಅಲ್ಲಿ ಒಬ್ಬರ ಮನೆಯಲ್ಲಿ ಸಮಾರಾಧನೆಯೂ ಆಯಿತು.

ಆಟ ಶುರುವಾಗುತ್ತದೆ ಎನ್ನುವಷ್ಟರಲ್ಲಿ ನಾವಲ್ಲಿ ಬಂದು ತಲುಪಿದ್ದೆವು. ಹೊಸ್ತೋಟ ಭಾಗವತರು ಪ್ರಸಂಗದ ಬಗ್ಗೆ ವಿವರಿಸುತ್ತಿದ್ದರು.ಅವರೇ ಬರೆದ ಭೌಮಾಸುರ ಕಾಳಗ ಪ್ರಸಂಗವದು. ಭೌಮಾಸುರನೇ ನರಕಾಸುರ ಎಂದು ಎಳೆ ಎಳೆಯಾಗಿ ವಿವರಿಸಿದರು.

ಹಿಮ್ಮೇಳದವರು ಗಣಪತಿ ಸ್ತುತಿಯಿಂದ ಆರಂಬಿಸಿದರೆ ಮುಂದೆ ೨ ಚಿಕ್ಕ ಮಕ್ಕಳು ಬಾಲಗೋಪಾಲ ವೇಶವನ್ನು ನಿರ್ವಹಿಸಿದರು.
ಆರಂಭದಲ್ಲಿ ತೆರೆಕುಣಿತದೊಂದಿಗೆ ದೇವೇಂದ್ರನ ಪ್ರವೇಶವಾಯಿತು. ಹಾರಾಡಿ/ಮಟ್ಪಾಡಿ ತಿಟ್ಟಿನ ಗಂಭೀರ ಕುಣಿತ, ಗತ್ತುಗಾರಿಕೆಯ ಮಾತಿನೊಂದಿಗೆ ದೇವೇಂದ್ರನ ಪಾತ್ರಧಾರಿ ಗಮನ ಸೆಳೆದರು.ಯಾವ ಸಂದರ್ಭದಲ್ಲಿಯೂ ಅವರ ಕುಣಿತ ಹಾಗೂ ಮಾತುಗಾರಿಕೆ ಹದ ಮೀರದೆ ಹಿತವನ್ನುಂಟು ಮಾಡಿತು. ಪ್ರಸಂಗದ ಆರಂಭದಿಂದ ಅಂತ್ಯದವರೆಗೂ ಈ ಪಾತ್ರಕ್ಕೆ ಅವಕಾಶವಿತ್ತು.

ನಂತರದ ಪಾತ್ರ ನರಕಾಸುರ. ದೈತ್ಯ ಪಾತ್ರಕ್ಕೆ ಒಪ್ಪುವಂತಹ ಮೈಕಟ್ಟು, ಹೆಜ್ಜೆ ಹಾಗು ಗಟ್ಟಿತನದ ಮಾತುಗಾರಿಕೆಯಿಂದ ಪ್ರವೇಶದಿಂದ ಕೊನೆಯವರೆಗೂ ಸೂಜಿಗಲ್ಲಿನಂತೆ ಮನಸೆಳೆದ ಪಾತ್ರ. ಮುಖವರ್ಣಿಕೆ ಹಾಗೂ ಪಾತ್ರಪೋಷಣೆಯಿಂದ ಇತ್ತೀಚಿನ ದಿನಗಳಲ್ಲಿ ಉತ್ತಮ ಹೆಸರು ಮಾಡುತ್ತಿರುವ ಈ ಕಲಾವಿದ ಆ ದಿನ ಕೂಡಾ ಅದೇ ಭರವಸೆಯನ್ನು ಮೂಡಿಸುವಲ್ಲಿ ಸಫಲರಾದರು.
ಕೃಷ್ಣನ ಪಾತ್ರಧಾರಿಯು ಪ್ರವೇಶವೇ ವಿಶೇಷತೆಯಿಂದ ಕೂಡಿತ್ತು. ಭಾಗವತರು ಆ ಸಂಧರ್ಭಕ್ಕೆಂದೇ ಬರೆದ ಪದ್ಯಕ್ಕೆ ಅವರ ಅಭಿನಯ ಯಾವ ವೃತ್ತಿಪರ ಕಲಾವಿದನನ್ನೂ ಮೀರಿಸುವಂತಿತ್ತು. ಖಚಿತವಾದ ಲಯ, ಬೇಕಾದಷ್ಟೇ ಕುಣಿತ, ಅರ್ಥಗರ್ಭಿತ ಅಭಿನಯ, ಹಿತಮಿತವಾದ ಮಾತುಗಾರಿಕೆಯಿಂದ ತಮ್ಮ ಮೇಲಿನ ಭರವಸೆಯನ್ನು ಹುಸಿಗೊಳಿಸಲಿಲ್ಲ.
ಆ ದಿನ ಸತ್ಯಭಾಮೆಯ ಪಾತ್ರ ಎಲ್ಲರನ್ನೂ ಮೀರಿಸಿದಂತಹದ್ದು. ಬಹುಷಃ ಅಂತ ಪಾತ್ರಪೋಷಣೆಯನ್ನು ಇತ್ತೀಚಿನ ದಿನಗಳಲ್ಲಿ ನಾನು ಕಂಡಿದ್ದೇ ಇಲ್ಲ. ಇಲ್ಲಿ ಎಷ್ಟು ಬರೆದರೂ ಕಡಿಮೆಯೇ.
ದೇವೇಂದ್ರ ಮತ್ತು ನರಕಾಸುರನ ಬಲಗಳ ಪಾತ್ರ ಮಾಡಿದವರು ಕೂಡಾ ಗಮನ ಸೆಳೆಯುವಂತೆ ಮಾಡಿದ್ದು ಆವತ್ತಿನ ವಿಶೇಷ.

ಹಿಮ್ಮೇಳದ ಇಬ್ಬರಂತೂ ಅತ್ಯಂತ ನುರಿತ ಕಲಾವಿದರಾಗಿದ್ದರಿಂದ ಎಲ್ಲೂ ಗೊಂದಲಕ್ಕೆ ಆಸ್ಪದವಾಗಲಿಲ್ಲ.
ಭಾಗವತರು ಉತ್ತಮವಾಗಿಯೇ ಹಾಡಿದರಾದರೂ ಅವರ ಸಾಮರ್ಥ್ಯಕ್ಕೆ ತಕ್ಕುದಾಗಿ ಹಾಡಲಿಲ್ಲ. ಸ್ವಲ್ಪ ಉದಾಸೀನತೆ ಭಾಗವತಿಕೆಯಲ್ಲಿ ಎದ್ದು ಕಾಣುತ್ತಿದ್ದಂತ ದೃಶ್ಯ. ಗುರುವಿನಿಂದ ಬಂದ ಬಳುವಳಿಯೇ ಇರಬಹುದು ಎಂದುಕೊಂಡೆ.

ಬೇರೆ ಬೇರೆ ಹವ್ಯಾಸಿ ಕಲಾವಿದರು ಸಮರ್ಥ ನಿರ್ದೇಶನದಲ್ಲಿ ಒಂದು ಉತ್ತಮ ಕಥಾಭಾಗವನ್ನು ಹೇಗೆ ಒಪ್ಪಿಸಬಹುದು ಎಂಬುದಕ್ಕೆ ಜ್ವಲಂತ ಉದಾಹರಣೆ ಈ ಪ್ರಯೋಗ. ಸುಮಾರು ಮೂರು ತಾಸು ನಡೆದ ಈ ಆಟದ ಯಾವುದೇ ಭಾಗವೂ ಕೂಡಾ ಬೀಳಾಗಲಿಲ್ಲ. ಇಂತಹ ಪ್ರದರ್ಶನ ಏರ್ಪಡಿಸಿದ ಮಹಾಬಲೇಶ್ವರ ಗೋಟಗಾರು ಇವರಿಗೆ ಮತ್ತು ಆಟದ ವಿಚಾರವನ್ನು ತಿಳಿಸಿದವರಿಗೂ ಮನಸ್ಸಿನಲ್ಲಿಯೇ ಧನ್ಯವಾದ ಅರ್ಪಿಸಿ ಆಟ ಮುಗಿಸಿ ಹೊರಟಾಗ ನನ್ನ ಮನಸ್ಸಿನಲ್ಲಿ ಮೂಡಿದ ಪ್ರಶ್ನೆ. ’ಹವ್ಯಾಸಿಗಳು ಇಷ್ಟು ಒಳ್ಳೆಯ ಆಟ ಮಾಡಬಹುದೇ?’ ಎಂದು!

ಆಟದ ವಿವರ:---
ಸ್ಥಳ : ಹಂಸಗಾರು ದೇವಸ್ಥಾನ
ದಿನಾಂಕ : 7 -11-2010, ಭಾನುವಾರ, ಸಂಜೆ 6:30

ಭಾಗವತರು : ರವೀಂದ್ರ ಕೃಷ್ಣ ಭಟ್ಟ, ಅಚವೆ
ಮದ್ದಳೆ : ಎ.ಪಿ. ಫಾಟಕ್, ಬೆಂಗಳೂರು.
ಚಂಡೆ : ಸಂಪ ಲಕ್ಷ್ಮೀನಾರಾಯಣ.

ದೇವೇಂದ್ರ : ಸುಜಯೀಂದ್ರ ಹಂದೆ, ಕೋಟ
ನರಕಾಸುರ : ಸಂಜಯ, ಬೆಳಿಯೂರು
ಕೃಷ್ಣ : ಶ್ರೀಮತಿ ಸೌಮ್ಯ ಅರುಣ, ಗೋಟಗಾರು
ಸತ್ಯಭಾಮೆ : ಸದಾಶಿವ ಭಟ್ಟ, ಯಲ್ಲಾಪುರ (ಇಡಗುಂಜಿ ಮೇಳದ ಈಗಿನ ಸ್ತ್ರೀವೇಷಧಾರಿ)
ಬಲ : ರಾಘವೇಂದ್ರ ಬೆಳಿಯೂರು ಮತ್ತು ಹರೀಶ.


Tuesday, April 6, 2010

ಕಾರ್ತವೀರ್ಯ, ಕೌತುಕಮಯ ಆಟ

ಮೊನ್ನೆ ಮಾರ್ಚ್ ೨೧ ಕ್ಕೆ ಒಂದು ವಿಶೇಷ ಆಟ. ಸ್ಥಳ ಆಂಧ್ರಹಳ್ಳಿ (ಇದು ಹಂದ್ರಹಳ್ಳಿ ಹೆಸರಿನ ಅಪಭ್ರಂಶು) ಸಮೀಪದ ಪ್ರಸನ್ನ ಚಂದ್ರಶೇಖರ ಆಶ್ರಮ, ಪ್ರಸಂಗ ಕಾರ್ತವೀರ್ಯ.

ಕರೆ ಬಂದಾಗ ಒಪ್ಪಿದೆ, ಯಾಕೆಂದರೆ ಆಟವಿಲ್ಲದೇ ತಿಂಗಳು ಮೇಲಾಗಿ ಕೈ ತುರಿಸುತಿತ್ತು. ಅಲ್ಲದೇ ಹೆಸರಾಂತ ಕಲಾವಿದರೂ ಇದ್ದರು. ಮೇಲಾಗಿ ಆಗಷ್ಟೇ ಅಪರೂಪಕ್ಕೆ ಚಂಡೆ ರಿಪೇರಿ ಮಾಡಿದ್ದೆ ಉತ್ತಮ ಸ್ವರವೂ ಬಂದಿತ್ತು.

ಎಂದಿನಂತೆ ಅರ್ಧ ಗಂಟೆ ಮೊದಲು ಅಲ್ಲಿ ತಲುಪಿದೆ. ಚೀಲ ಕೆಳಗಿಡುವ ಹೊತ್ತಿಗೆ ಅಲ್ಲಿಗೆ ಬಂದ ಸತ್ಯಣ್ಣ ಒಳ್ಳೆ ಚಾ ಮಾಡಿದ್ದ ಕುಡಿಯ ಎಂದು ಆತ್ಮೀಯವಾಗಿ ನುಡಿದ. ಚಾ ಕುಡಿಯುವಷ್ಟರಲ್ಲೇ ಭಾಗವತರು ಮತ್ತು ಮದ್ದಲೆಗಾರರು ತಯಾರಾಗಿದ್ದರು. ಅಂದ ಹಾಗೆ ಅವತ್ತಿನ ಕಲಾವಿದರು .ಕೊಳಗಿ ಕೇಶವ ಹೆಗಡೆ(ಭಾಗವತಿಕೆ), ಸಾಗರ ರಾಜೇಶ ಆಚಾರ್ಯ(ಮದ್ದಳೆ) ಚಂಡೆಗೆ ನಾನು. ಕಲಗದ್ದೆ ವಿನಾಯಕ ಹೆಗಡೆ(ಕಾರ್ತವೀರ್ಯ), ಬೆಳಿಯೂರು ಸಂಜಯ (ರಾವಣ) ಮತ್ತಿತರ ಕಲಾವಿದರಿದ್ದರು. ನನ್ನ ಹೊಸ ರೂಪದ ಚಂಡೆ ಶೃತಿ ಮಾಡಲು ಕೆಲವೇ ಸೆಕೆಂಡುಗಳು ಸಾಕಾದವು. ಪೇಟ ಸುತ್ತುವುದರಲ್ಲಿ ’ಎಕ್ಸ್ಪರ್ಟ್’ಆದ ಕಾರಣ ಅದು ನನಗೆ ಯಾವತ್ತು ಸಮಸ್ಯೆಯಾಗುವುದಿಲ್ಲ. ಭಾಗವತರು ಕಪ್ಪೆರಡರ ಶೃತಿ ಇರಿಸಿದ್ದರು.

ಇಲ್ಲಿ ಇನ್ನೊಂದು ವಿಷಯ ಹೇಳಲೇಬೇಕು ಎನಿಸುತ್ತಿದೆ.... ಏಕೋ ಏನೋ! ನಾನು ಮತ್ತು ಕೇಶವ ಭಾಗವತರು ರಂಗದ ಹೊರಗೆ ಎಷ್ಟೇ ಆತ್ಮೀಯರಾಗಿದ್ದರೂ, ರಂಗದ ಮೇಲಿನ ವೈಯುಕ್ತಿಕ ಸಾಧನೆಗಳಿಗೆ ಪರಸ್ಪರ ಗೌರವಾದಿಗಳಿದ್ದರೂ ನಮ್ಮಿಬ್ಬರಿಗೆ ರಂಗದಲ್ಲಿ ಆಗಿ ಬರುವುದಿಲ್ಲ. ಆದರೆ ಇದು ಇಬ್ಬರಿಗೂ ತಿಳಿದ ಮತ್ತು ಪರಸ್ಪರ ’ಡಿಸ್ಕಸ್’ ಮಾಡಿಕೊಳ್ಳಲಾಗದ ಕಹಿಸತ್ಯ. ಇಬ್ಬರಿಗೂ ಅವರದೇ ಆದ ದೌರ್ಬಲ್ಯ ಹಾಗೂ ಸಾಮರ್ಥ್ಯವಿದೆ. ಆದರೆ ದೌರ್ಬಲ್ಯವನ್ನು ಮಾತ್ರ ಎತ್ತಿ ತೋರಿಸುವ( ಎಲ್ಲರ ಎದುರಿಗೆ) ಗುಣವನ್ನು(ಅವರು ಎಂತಹ ಮಹಾನ್ ಕಲಾವಿದರೇ ಆಗಿರಲಿ) ನಾನಂತು ಸುತಾರಾಂ ಉಪ್ಪುತ್ತಿರಲಿಲ್ಲ. ನನ್ನ ಇಡೀ ರಂಗ ಜೀವನದಲ್ಲಿ ನಾನು ಕೆಲಸ ಮಾಡಿದ ಅತಿರಥ ಮಹಾರಥಲ್ಲಿ ಒಬ್ಬರು ಪ್ರಖ್ಯಾತ ಹಾಸ್ಯಗಾರರೊಬ್ಬರು ಮಾತ್ರ ರಂಗದಲ್ಲಿ ಒಮ್ಮೆ ಹಿಂತಿರುಗಿ ನನ್ನನ್ನು ನೋಡಿದ್ದರು*. ನಂತರ ಅವರಲ್ಲಿ ಮಾತುಕಥೆ ಜಗಳದವರೆಗೂ ಮುಂದುವರೆದಿತ್ತು. ಇದಕ್ಕೆ ನಾನು ಯಕ್ಷಗಾನವನ್ನು ಕಲಿತ ರೀತಿ, ಅರಗಿಸಿಕೊಂಡ ಕ್ರಮ, ಮತ್ತು ತ್ರಿವಿಕ್ರಮ ಸಾಧನೆ**ಗಳೇ ಕಾರಣವಾಗಿರಬಹುದು. ನನ್ನಷ್ಟಕ್ಕೇ ನಾನೇ ಇಚ್ಚಿಸಿ ಆಯ್ಕೆ ಮಾಡಿಕೊಂಡ ವಿಷಯಗಳು ಎರಡು. ಯಕ್ಷಗಾನ ಮತ್ತು ನನ್ನ ಹೆಂಡತಿ. ದೇವರ ದಯದಿಂದ ಎರಡೂ ವಿಷಯಗಳಲ್ಲಿಯೂ ಸಾರ್ಥಕ್ಯ ಹೊಂದಿದ ಭಾವ ನನ್ನದು. ನಾನು ಧಾರೇಶ್ವರ ಭಾಗವತರನ್ನು ಬಿಟ್ಟರೆ ಉಳಿದ ಎಲ್ಲಾ ಭಾಗವತರೊಂದಿಗೂ ಹಿಮ್ಮೇಳದಲ್ಲಿ ಭಾಗವಹಿಸಿದ್ದೇನೆ. ಸಾಮಾನ್ಯ ಎಲ್ಲ ಭಾಗವರೊಂದಿಗೂ ಆಟದ ಚರ್ಚೆ ಮಾಡುತ್ತೇನೆ. ಆದರೆ ಕೇಶವ ಭಾಗವತರೊಡನೆ ನನಗೆ ಇದು ಸಾಧ್ಯವಾಗುವುದಿಲ್ಲ... ಏಕೋ ನಾಕಾಣೆ!!!
ಇರಲಿ ಕಥೆ ಎತ್ತಲೋ ಸಾಗುತ್ತಿದೆ....ಆಟದ ವಿಷಯಕ್ಕೆ ಬರುವ

*ರಂಗದಲ್ಲಿ ಯಾವುದೇ ಕಲಾವಿದ ಕುಣಿಯುತ್ತಿರುವಾಗ ಚಂಡೆಯವನನ್ನೋ ಅಥವಾ ಮದ್ದಳೆಗಾರನನ್ನು ಹಿಂತಿರುಗಿ ನೋಡಿದ ಅಂತಾದರೆ ಹಿಮ್ಮೇಳ ಕಲಾವಿದರು ತನ್ನ (ಕುಣಿಯುವವನ) ಸಾಮರ್ಥ್ಯಕ್ಕೋ ಅಥವಾ ತಾಳಕ್ಕೋ..ಲಯಕ್ಕೋ ಸರಿಯಾಗಿ ಬಾರಿಸುತ್ತಿರಲಿಲ್ಲ ಎಂದೇ ಅರ್ಥ.

** ನನ್ನ ಬಿಡುವಿನ, ಪ್ರಯಾಣದ ವೇಳೆಯಲ್ಲಿ ಯಕ್ಷಗಾನದ ಪದ್ಯಗಳು.. ಅದರ ತಾಳ.. ಲಯವನ್ನು ಅಭ್ಯಾಸ ಮಾಡುವುದರ ಹೊರತು ನಾನು ಇನ್ನೇನು ಮಾಡುತ್ತಿರಲಿಲ್ಲ. ದೂರದೂರಿನ ಕಾಲೇಜಿನಲ್ಲಿ ಓದುತ್ತಿರುವಾಗ ನಡೆಯುವಾಗಲು ತಾಳಗಳ (ಬೇರೆ ಬೇರೆ) ಲಯಕ್ಕೆ ಸರಿಯಾಗಿ ನಡೆಯುತ್ತಿದ್ದೆ. ಇದರಿಂದ ಹಲವಾರು ಬಾರಿ ಹೆಣ್ಣು ಮಕ್ಕಳಿಂದ ನಗೆ ಪಾಟಲಿಗೆ ಗುರಿಯಾದದ್ದು ಇದೆ. ಒಂದು ಸಲವಂತು ನನ್ನ ಸಂಭದಿಕಳೊಬ್ಬಳು ನಮ್ಮ ಮನೆಗೆ ’ಅವ ಕಾಲು ಉಳಿಶಿಕಂಡಿದ್ದ ಕಾಣ್ತು ಒಂಥರಾ ನಡಿತ’ ಎಂದು ಫೋನ್ ಮಾಡಿದ್ದಳು.

(ಮುಂದುವರೆಯುವುದು)

Tuesday, November 3, 2009

ಮರೆಯಾದ ಮಹಾಬಲ

ಕೆರೆಮನೆ ಮಹಾಬಲ ಹೆಗಡೆ ಯಕ್ಷಗಾನ ಪ್ರಪಂಚ ಕಂಡ ಸರ್ವೋತ್ಕೃಷ್ಠ ಕಲಾವಿದ. ಹಿಮ್ಮೇಳ, ಮುಮ್ಮೇಳ ಎರಡರಲ್ಲೂ ಪರಿಣತಿ ಹೊಂದಿದ್ದ ಹೆಗಡೆ ಹಿಂದೂಸ್ತಾನಿ ಸಂಗೀತವನ್ನು ಅಭ್ಯಾಸ ಮಾಡಿಕೊಂಡಿದ್ದರು. ಇವರ ಅಳಿಯ (ಮಗಳ ಗಂಡ) ಪರಮೇಶ್ವರ ಹೆಗಡೆ ಪ್ರಖ್ಯಾತ ಹಿಂದೂಸ್ತಾನಿ ಸಂಗೀತಗಾರರು.

ಇವರ ಮೊದಲ ವೇಶವನ್ನು ನಾನು ರಂಗದಲ್ಲಿ ನೋಡಿದ್ದು ಪಟ್ಟಾಭಿಷೇಕದ ದಶರಥ, ಸಾಗರದಲ್ಲಿ ೧೯೮೯ ರ ಮಳೆಗಾಲದಲ್ಲಿ. ಆ ದಿವಸ ಇವರ ದಶರಥ, ಡಿ.ಜಿ. ಹೆಗಡೆ ಯವರ ರಾಮ, ಸುಬ್ರಹ್ಮಣ್ಯರ ಲಕ್ಷ್ಮಣ, ಮಂಟಪರ ಕೈಕೆ, ವಾಸುದೇವ ಸಾಮಗರ ಭರತ, ಕುಂಜಾಲು ಮಂಥರೆ. ಇಂತಾ ದಿಗ್ಗಜರ ಮೇಳಕ್ಕೆ ಆ ಕಾಲದಲ್ಲಿ ಅದ್ಭುತವೆನೆಸುವ ಕಂಠಸಿರಿಯನ್ನು ಹೊಂದಿದ್ದ ವಿದ್ವಾನ್ ಗಣಪತಿ ಭಟ್ಟರ ಭಾಗವತಿಕೆ. ಅಂತಾ ದಶರಥನನ್ನು ಈ ವರೆಗೂ ನಾನು ಕಂಡಿದ್ದೆ ಇಲ್ಲ. ಆ ವರ್ಷವೇ ಶುರುವಾದದ್ದು ಬಚ್ಚಗಾರು ಮೇಳ. ಅದರಲ್ಲಿ ಮಹಾಬಲ ಹೆಗಡೆ ಪ್ರಮುಖ ಪಾತ್ರಧಾರಿ. ಸಾಗರದ ಸುತ್ತ ಮುತ್ತ ನಡೆದ ಯಾವ ಆಟವನ್ನು ಬಿಡದೆ ನೋಡಿದ್ದೇನೆ. ಇವರ ದುಷ್ಟಬುದ್ದಿಯ ಪಾತ್ರಕ್ಕೆ ಹೆದರಿ ಹಿಂದೆ ಹೋಗಿ ಕುಳಿತಿದ್ದು ಉಂಟು. ಸರಿಸಾಟಿಯೇ ಇಲ್ಲದಂತ ಲಯಜ್ನಾನ, ಮನಸೆಳೆಯುವ ಕಂಠಸಿರಿ, ಪಾತ್ರಕ್ಕೆ ಮೀಸಲಾದ ವಿಶೇಷ ಕುಣಿತಗಳು, ಪದ್ಯ ನಿಂತಲ್ಲಿಗೆ ಮಾತನ್ನು ಆರಂಬಿಸುವ ವಿಧಾನ, ಅಕ್ಷರ ಅಕ್ಷರವನ್ನೂ ಬರೆದು ದಾಖಲಿಸಬಹುದಾದಷ್ಟು ಉತ್ತಮ ಸಾಹಿತ್ಯ, ಶೃತಿಜ್ಜ್ನಾನ, ವೇಶಭೂಷಣಗಳಲ್ಲಿ ತೋರುವ ಅಪೂರ್ವ ಆಸಕ್ತಿ, ಎಲ್ಲದರಲ್ಲೂ ಪರಿಪೂರ್ಣತೆಯನ್ನು ಬಯಸುವ ಹಪಹಪಿಕೆ ಮುಂತಾದ ವಿಶೇಷತೆಯಿಂದಾಗಿ ಬೇರೆಲ್ಲಾ ಕಲಾವಿದರಿಗಿಂತಾ ಭಿನ್ನವಾಗಿ ಎದ್ದು ಕಾಣುವ ಹೆಗಡೆಯವರೊಂದಿಗೆ ಯಕ್ಷಗಾನದಲ್ಲಿ ಭಾಗವಹಿಸುವ ಪುಣ್ಯ ನನಗೂ ಒದಗಿ ಬಂದಿತ್ತು.

ಅದು ಭುವನಗಿರಿ ಮೇಳ.೧೯೯೪-೯೫-೯೬ ರ ಸಮಯದಲ್ಲಿ ಮೆರೆದ ಮೇಳ. ಶಿರಸಿ ಮೇಳವನ್ನು ತ್ಯಜಿಸಿದ ಶಿರಳಗಿ ಭಾಸ್ಕರ ಜೋಶಿಯವರು ಭುವನಗಿರಿ ಮೇಳವನ್ನು ಕಟ್ಟಿದ್ದರು. ಮೇಳದಲ್ಲಿ ಮಹಾಬಲ ಹೆಗಡೆಯವರು, ಗೋಡೆ, ಡಿ.ಜಿ., ಕೊಳಗಿ ಅನಂತ ಹೆಗಡೆ, ಜೋಷಿ, ಕಣ್ಣೀಮನೆ ಗಣಪತಿ, ನರಸಿಂಹ ಚಿಟ್ಟಾಣಿ, ಹಾರ್ಸಿಮನೆ, ಸುಬ್ರಾಯ ಭಟ್ಟ ಮುಂತಾದ ಹೆಸರಾಂತ ಕಲಾವಿದ್ದರು.ಹಿಮ್ಮೇಳದಲ್ಲಿ ಗಿರಿಗಡ್ಡೆ, ಕೊಳಗಿ ಮಾಧವ, ಪರಮೇಶ್ವರ ಭಂಡಾರಿ, ಕೆಸರಕೊಪ್ಪ ವಿಘ್ನೇಶ್ವರ, ಅಶೋಕ ಕ್ಯಾಸನೂರು ಮತ್ತು ನಾನು.ವಾರಕ್ಕೆ ೨-೩ ಕಾರ್ಯಕ್ರಮ ಇರುತ್ತಿತ್ತು.

ನಾನು ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಿರಲಿಲ್ಲ, ಕೆಲವೊಂದು ಆಟಕ್ಕೆ ಮಾತ್ರ ಹೋಗಿದ್ದೇನೆ. ಒಂದು ಕಾರ್ಯಕ್ರಮ ತಾರಗೋಡು ಎಂಬಲ್ಲಿ. ಆ ದಿನ ಪಟ್ಟಾಭಿಷೇಕ - ಗದಾಯುದ್ಧ. ಮಹಾಬಲ ಹೆಗಡೆಯವರ ದಶರಥ, ಗೋಡೆಯವ ಕೌರವ. ಮೊದಲು ಚಂಡೆಗೆ ಹೋಗುವುದು ನಾನೆ ಆಗಿತ್ತು. ಚೀಲದಿಂದ ಚಂಡೆ ತೆಗೆಯುವಷ್ಟರಲ್ಲೆ ಒಬ್ಬರು ಬಂದು ಹೇಳಿದರು, ಮಹಾಬಲ ಹೆಗಡೆಯವರು ಕರೆಯುತ್ತಿದ್ದಾರೆ ಎಂದು. ಹುಂಬನಂತೆ ಇದ್ದ ನಾನು ಅವರ ಎದುರಿಗೆ ಹೋಗಿ ನಿಂತೆ. ಅವರು ಹೇಳಿದ್ದು ಇಷ್ಟೆ " ಹಾರ್ಮೋನಿಯಂನಲ್ಲಿ ಮೊದಾಲ್ನ ಮನೆ ಶೃತಿ ಹಾಕು" ಎಂದು. ಸರಿ ಆಟ ಪ್ರಾರಂಭವಾಯಿತು ಮೊದಲಿಗೆ ದಶರಥನ ಒಡ್ಡೋಲಗ. ೨ ಪದ್ಯ ಮುಗಿದಿತ್ತಷ್ಟೆ, ಮತ್ತೊಂದು ಪಾತ್ರ ಮಾತಾಡುತ್ತಿರುವಾಗ ರಂಗದಲ್ಲಿ ಚಂಡೆ ಬಾರಿಸುತ್ತಿದ್ದ ನನ್ನಲ್ಲಿಗೆ ನಿಧಾನವಾಗಿ ಬಂದು "ಇನ್ನೊಂದು ಮನೆ ಮೇಲೆ ಹಾಕು" ಎಂದು ಆಜ್ನಾಪಿಸಿದರು. ಸರಿ ನಾನು ಭಾಗವತರಲ್ಲಿ ಹೇಳಿದಾಗ ಅವರಿಗೂ ಅದೇ ಬೇಕಾಗಿತ್ತು. ಆದರೆ ಆ ಸಮಯದಲ್ಲಿ ನನಗೆ ಸರಿಯಾಗಿ ಶೃತಿ ಮಾಡಲು ಬರುತ್ತಿರಲಿಲ್ಲ. ನಿಧಾನವಾಗಿ ಒದ್ದಾಡುತ್ತಾ ಇರುವಾಗ ಅವರು ಓರೆಗಣ್ಣಿನಲ್ಲಿ ಗಮನಿಸುತ್ತಾ ಇದ್ದುದು ನನಗೆ ಗೊತ್ತಾಯಿತು. ಒಮ್ಮೆ ಮೆಲುವಾಗಿ ತಟ್ಟಿದೆ. ಆದರೆ ಶಬ್ದ ಸ್ವಲ್ಪ ಹೆಚ್ಚಾಯಿತೋ ಏನೋ ತಕ್ಷಣ ಸಿಟ್ಟುಗೊಂಡವರೇ "ಎಂತಾ ರಗಳೆ ನಿಂದು ಎದ್ದೋಗ್" ಎಂದು ಹೇಳಿ ಮುಗಿಸುವುದರಷ್ಟರಲ್ಲಿ ನಾನು ಚೌಕಿಗೆ ಓಡಿಯಾಗಿತ್ತು. ಮುಖ್ಯ ಚಂಡೆವಾದಕನು ಹೆದರಿ ಚೌಕಿಯಲ್ಲೇ ಮುದುರಿ ಕುಳಿತ. ಪ್ರಸಂಗದ ಅರ್ಧ ಭಾಗ ಕೇವಲ ಮದ್ದಲೆವಾದನ ದೊಂದಿಗೆ ಕಳೆಯಿತು. ಮಧ್ಯೆ ಅವರು ಓಳಗೆ ಬಂದಾಗ ನಾನು ವಿನಯದಿಂದ ಅವರಲ್ಲಿ ’ ನಂಗೆ ಚಂಡೆ ಶೃತಿ ಮಾಡಕ್ಕೆ ಹೆಚ್ಚು ಅನುಭವ ಇಲ್ಲೆ, ತಪ್ಪಾದರೆ ನಿಮ್ಮ ಹೊಟ್ಟಿಗೆ ಹಾಕ್ಯಳಿ’ ಎಂದು ಬೆಪ್ಪನಂತೆ ಕೈಕಟ್ಟಿಕೊಂಡು ನಿಂತೆ. ’ಹ್ಹೂಂ ಎಲ್ಲಾ ಹೊಟ್ಟಿಗೆ ಹಾಕ್ಯಂಡೆ ನನ್ನ ಹೊಟ್ಟೆ ಇಷ್ಟು ದೊಡ್ಡ ಆಯ್ದು, ನಡಿ ನಡಿ ರಂಗಸ್ಥಳಕ್ಕೆ ಚಂಡೆ ಹಿಡ್ಕ, ಮದ್ದಲೆಗಾರನ(ಪರಮೇಶ್ವರ ಭಂಡಾರಿ,ಕರ್ಕಿ) ಹತ್ರ ಶೃತಿ ಮಾಡಿಕೊಡಕ್ಕೆ ಹೇಳು’ ಎಂದು ಗರ್ಜಿಸಿದರು. ಹೀಗೆ ಪ್ರಸಂಗ ಮುಗಿಯಿತು. ನಾನು ಒಳಗೆ ಬಂದೆ. ವೇಶ ಕಳಚಿಟ್ಟವರೆ ನನ್ನನ್ನು ಕರೆದು ’ ಆ ಚಂಡೆ ತಗಬಾ, ನಾ ಹೇಳ್ತೆ ಹೆಂಗೆ ಸುರ್ತಾನ್ ಮಾಡದು ಅಂತ’ ಎಂದಾಗ ನನಗೆ ಆಶ್ಚರ್ಯ. ಸರಿ ಎಂದು ಚಂಡೆಯನ್ನು ಅವರ ಮುಂದೆ ಇಟ್ಟಾಗ ಅದನ್ನು ಸುರ್ತಾನ್ (ಶೃತಿ) ಮಾಡುವ ಟೆಕ್ನಿಕ್ ಹೇಳಿಕೊಟ್ಟರು. ನನಗೆ ಆ ವಾದನ ಶೃತಿ ಮಾಡುವ ಕ್ರಮ ತಿಳಿದಿದ್ದೇ ಆವಾಗ!!! . ಇದು ಹಿಂಗಂತ ನಂಗೆ ಗೊತ್ತಿರ್ಲೆ ತುಂಬಾ ಉಪಕಾರಾತು ಎಂಬ ನನ್ನ ಮಾತಿನತ್ತ ವಿಶೇಷ ಗಂಭೀರ ನಗೆಯೊಂದನ್ನು ಬೀರಿದರು. ಆ ವಕ್ರಹಲ್ಲಿನ ಬಾಯ ನಗುವೇ ಒಂದು ಚಂದ. ಆಗ ಅಲ್ಲೇ ಇದ್ದ ಕೊಳಗಿ ಅನಂತಜ್ಜ ’ಅಪ್ಪೀ ಯಕ್ಷಗಾನದಲ್ಲಿ ಚಂಡೆ ಶೃತಿ ಮಾಡದು ಹೇಂಗೆ ಅಂತಾ ಮೊದಾಲ್ ತೋರಿಸಿದವರೇ ಅವ್ರು ಎಂದಾಗ ನನಗೆ ಆನಂದವಾಯಿತು. ಅಷ್ಟು ದೊಡ್ಡ ಮನುಷ್ಯ ನನಗೂ ಅದರ ಟೆಕ್ನಿಕ್ ತಿಳಿಸಿದನಲ್ಲ ಎಂದು. ನಾನು ಸುಮ್ನೆ ಅವರಲ್ಲಿ ಇದರ ಮುಚಿಗೆ ಯಾವ ಚರ್ಮದ್ದು ಅಂತ ಕೇಳಿದಾಗ ಹುಸಿ ಕೋಪದಿಂದ ಸರಿ ಬಾರ್ಸದೆ ಹಡೇ ಮಾಡಿದ್ರೆ ನಿನ್ನ ಬೆನ್ನಿನ ಚರ್ಮ ಸುಲಿದು ಮುಚಿಗೆ ಮಾಡ್ಸ್ತೆ ಎಂದರು. ೨-೩ ಡಬ್ಬಲ್ ಪೆಟ್ಟು ಬಾರ್ಸುವ ವಿಧಾನ ಹೇಳಿಕೊಟ್ಟರು. ಈ ಆಟಕ್ಕು ಮೊದಲು ನಾನು ಅವರ ಪಾತ್ರಕ್ಕೆ ಚಂಡೆ ಬಾರಿಸಿರಲಿಲ್ಲವಾದರೂ ಅವರಲ್ಲಿ ಸುಮ್ಮನೇ ಮಾತನಾಡುತಿದ್ದೆ. ಅವರು ಹೇಳಿದ್ದಕ್ಕಲ್ಲ ಹೂಹಾಕುವುದಷ್ಟೇ ನನ್ನ ಕೆಲ್ಸವಾಗಿತ್ತು. ಈ ಆಟದ ನಂತರ ೩-೪ ಪಾತ್ರಗಳಿಗೆ ಚಂಡೆಗಾರನಾಗಿ ಒದಗುವ ಸಂಧರ್ಭ ಬಂದಿದ್ದರೂ ಅಲ್ಲಿ ಯಾವ ತಾಪತ್ರಯವುಂಟಾಗಲಿಲ್ಲ.

ಅದಾದ ನಂತರ ಅವರನ್ನು ಕಂಡಿದ್ದು ಹೊಸನಗರ ರಾಮಚಂದ್ರಾಪುರಲ್ಲಿ ನಡೆದ ಯಕ್ಷಗಾನ ಸಮ್ಮೇಳನದಲ್ಲಿ(೨೦೦೨)
ಅವರು ಸಮ್ಮೇಳನದ ಅಧ್ಯಕ್ಷರು. ೩ ದಿನದ ಕಾರ್ಯಕ್ರಮ. ಹೊರಗಡೆ ಒಂದು ಸಾಟಿ ಪಂಜೆ ಉಟ್ಟು ತಿರುಗಾಡುತಿದ್ದರು, ಸಕ್ಕರೆ ಕಾಯಿಲೆಯಿಂದಾಗಿ ಪದೇ ಪದೇ ಮೂತ್ರವಿಸರ್ಜನೆ ಮಾಡಬೇಕಾದ ಪರಿಸ್ತಿತಿ ಇತ್ತು. ಅವರ ಹತ್ರ ಹೋದ ನಾನು ’ಅಜ್ಜ ನಾನು ಅಪ್ಪಿ ಚಂಡೆ ಬಾರ್ಸ್ತ ಇದ್ದ್ನಲಾ’ ಅಂದೆ ಸಲುಗೆಯಿಂದ. ಸರಿ ಶುರುವಾಯಿತು ಮಾತಿನ ವರಸೆ. ಎಲ್ಲಿದ್ದೆ, ಎಂತಾ ಮಾಡ್ತಾ ಇದ್ದೆ ಎಲ್ಲಾ ಕೇಳಿದರು. ಈಗೆಲ್ಲಾ ಕೆಲವು ಗಣಗಾಂಪರೆಲ್ಲಾ ಆಟ ಮಾಡದು ನೋಡಿದ್ರೆ ತಮಾ ಎಂದು ತಮ್ಮ ಅಸಹನೆ ವ್ಯಕ್ತ ಪಡಿಸಿದರು. ಪುಣ್ಯಕ್ಕೆ ಆಟದ ವಿಷಯ ನಾನು ಮಾತಾಡಿರಲಿಲ್ಲ, ಇಲ್ಲದೇ ಹೋದರೆ ನನ್ನ ಬುಡಕ್ಕೇ ಬರುತ್ತಿತ್ತು. ಅಲ್ಲಿ ಅವರು ಮಾಡಿದ ಅಧ್ಯಕ್ಷ ಬಾಷಣವು ಜೀವಮಾನದಲ್ಲಿ ನಾನು ನೋಡಿದ ಅತ್ಯುತ್ತಮ ಭಾಷಣಗಳಲ್ಲಿ ಒಂದು.

ಕಳೆದ ನವೆಂಬರನಲ್ಲಿ (ನವೆಂಬರ ೧೨, ೨೦೦೮) ಅವರ ಕುರಿತಾದ ಪುಸ್ತಕ ಬಿಡುಗಡೆ, ಸನ್ಮಾನ ಕಾರ್ಯಕ್ರಮಕ್ಕೆ ಬಂದಿದ್ದರು. ಅವತ್ತು ಯಕ್ಷಗಾನದ ಗಣಪತಿ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು, ಇದರಲ್ಲಿ ಭಾಗವಹಿಸುವ ಪುಣ್ಯ ನನ್ನದಾಯಿತು. ನೆಬ್ಬೂರು ಭಾಗವತರು, ಎ.ಪಿ. ಫಾಟಕ್ ಹಾಗು ನಾನು ಪ್ರಾರ್ಥನೆಯನ್ನು ಮುಗಿಸಿದೆವು ಅವರನ್ನು ಮಾತಾಡಿಸಿದಾಗ ಮೊದಲು ಗುರುತು ಸಿಗಲಿಲ್ಲ. ಆಮೇಲೆ ಪ್ರಾರ್ಥನೆಗೆ ಚಂಡೆ ಬಾರಿಸಿದನ್ನು ನೋಡಿದ ಅವರು ’ಚಂಡೆ ಅಪ್ಪಿಯನಾ’ ಎಂದು ಗುರುತಿಸಿದಾಗ ಜೀವನ ಸಾರ್ಥಕವೆನಿಸಿದ ಅನುಭವವಾಯಿತು.

ನೋಡಲು ಸುಮಾರಿಗೆ ನನ್ನ ಅಜ್ಜನ ಪ್ರತಿರೂಪದಂತೇ ಇದ್ದ ಅವರನ್ನು ನಾನು ಅಜ್ಜ ಎಂದೇ ಸಂಭೋದಿಸುತ್ತಿದ್ದೆ. ಮೊನ್ನೆ ೨೯ ರಂದು ಸುಮಾರು ೧:೩೦ ಕ್ಕೆ ಅವರು ನಿಧನರಾದರೆಂದು ಸುದ್ದಿ ಬಂದಾಗ ಒಮ್ಮೆಲೆ ಜೀವವು ಚಡಪಡಿಸಿತು. ರಂಗದ ಮೇಲೆ ನನಗೆ ಅತ್ಯಂತ ಹಿಡಿಸಿದ ಪಾತ್ರಧಾರಿಯೆಂದರೆ( ಪ್ರೇಕ್ಷಕನಾಗಿ) ಮಹಾಬಲ ಹೆಗಡೆ. ಮೇಳದ ಆ ಕಿರು ತಿರುಗಾಟದಲ್ಲಿ, ಅವರ ಹತ್ರ ಬೈಸಿಕೊಂಡ, ಮಾತಾಡಿದ ಎಲ್ಲವೂ ನೆನಪಾಯಿತು. ಆ ನೆನಪಿನೊಂದಿಗೇ ಈ ಬರಹವನ್ನು ಇಲ್ಲಿ ಇಳಿಸಿದ್ದೇನೆ. ಭಗವಂತನು ಅವರ ಆತ್ಮಕ್ಕೆ ಶಾಂತಿ ಕೊಡಲಿ, ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ಕೊಡಲಿ ಎಂಬ ಪ್ರಾರ್ಥನೆ ಯೊಂದಿಗೆ ಮುಕ್ತಾಯಗೊಳಿಸುತ್ತಿದ್ದೇನೆ.

ಹಡಿನಬಾಳ ಯಕ್ಷಪರ್ವ ನಾ ಕಂಡಂತೆ -- ಮುಂದುವರೆದುದು

ಆಟದ ದಿನ ನಿರೀಕ್ಷಿಸಿದಂತೆ ಜನಸಾಗರವೇ ಸೇರಿತ್ತು. ಮೊದಲ ಭಾಗದ ಬಲರಾಮ ಪಾತ್ರ ಮಾಡಿದ ಸುಧೀಂದ್ರ ಹೊಳ್ಳರ ಪ್ರವೇಶದಿಂದ ಶುರುವಾದದ್ದು ನಂತರ ಯಲಗುಪ್ಪ ಸುಬ್ರಹ್ಮಣ್ಯರ ಸುಭದ್ರೆ ಪ್ರವೇಶ ಹಾಗೂ ಬಲರಾಮ- ಸುಭದ್ರೆ ಯರ ಸಂಭಾಷಣೆ ರೋಚಕವಾಗಿತ್ತು. ಯಾವತ್ತು ಸರಿಯಾದ ಹೋಮ್ ವರ್ಕ್ ಮಾಡಿಕೊಂಡೇ ರಂಗಕ್ಕಿಳಿಯುವ ಹೊಳ್ಳರು ಸಮರ್ಥವಾಗಿ ಬಲರಾಮನ ವಾದ ಮಂಡಿಸಿದರು. ಆಭಿಮನ್ಯುವಿನ ಪಾತ್ರಧಾರಿ ಅರ್ಪಿತಾ ಹೆಗಡೆ ಕುಣಿತದಲ್ಲಿ ಮಿಂಚಿದರೂ ವೇಷಭೂಷಣವೆಲ್ಲ ಕಳಚಿಕೊಂಡಿದ್ದು ಅಬಾಸವೆನಿಸಿತು. ಆನಂತರ ಪ್ರವೇಶವಾದದ್ದು ಮುಖ್ಯ ಆಕರ್ಷಣೆಯಾಗಿದ್ದ ಶ್ರೀಪಾದ ಹೆಗಡೆಯವರು. ಘಟೋತ್ಕಚನ ಸಾಂಪ್ರದಾಯ ಒಡ್ಡೋಲಗ ಮಾಡಿದ್ದು ಅತ್ಯಂತ ಸಮಯೋಚಿತವೆನಿಸಿತು. ನಂತರ ಅಭಿಮನ್ಯು- ಘಟೋತ್ಕಚರ ಯುದ್ಧ, ಸುಭದ್ರೆಯ ರೋಧನೆ, ಸುಭದ್ರೆ-ಘಟೋತ್ಕಚ ಸಂಬಾಷಣೆ ಎಲ್ಲೂ ಬೀಳಾಗಲಿಲ್ಲ ಈ ಸನ್ನಿವೇಶದ ನಂತರ ಅಭಿನಂದನಾ ಕಾರ್ಯಕ್ರಮವಿತ್ತು. ಮನಸ್ಸಿನ ಭಾವನೆಗಳನ್ನು ಹತ್ತಿಕ್ಕಿಕ್ಕೊಂಡು ಮಾತಾಡಿದ ಶ್ರೀಪಾದ ಹೆಗಡೆಯವರು ನನಗೆ ನಿಮ್ಮೆಲರ ಅಭಿಮಾನವಿದ್ದರೆ ಸಾಕು ಅನುಕಂಪ ಬೇಡ, ನಮ್ಮ ಮನೆಯಲ್ಲಿ ಟಿವಿ ಮೊದಲಾದ ಪರಿಕರಗಳಿಲ್ಲ ಅಂದು ನಮ್ಮ ಮನೆಯಲ್ಲಿ ಯಾರಿಗೂ ಬೇಸರವಿಲ್ಲ ಎಂದು ಮಾರ್ಮಿಕ ವಾಗಿ ನುಡಿದರು.

ಆನಂತರ ಕಥಾಭಾಗ ಮುಂದುವರೆಯಿತು. ಸುಬ್ರಹ್ಮಣ್ಯ ಚಿಟ್ಟಾಣಿಯವರ ಆರಕ್ಕೇರದ ಮುರಕ್ಕಿಳಿಯದ ಕೃಷ್ಣ, ಅಪರೂಪಕ್ಕೆ ಬಲರಾಮನ ಪಾತ್ರ ಮಾಡಿದ ಚಿಟ್ಟಾಣಿಯವರ ಅದ್ಭುತವೆನಿಸುವ ರಂಗ ಚಲನೆ ಮುದ ನೀಡಿತು.

ಹಿಮ್ಮೇಳದಲ್ಲಿ ಭಾಗವತರಾಗಿ ಕೊಳಗಿ ಕೇಶವ ಹೆಗಡೆ ಮತ್ತು ಸರ್ವೇಶ್ವರ ಹೆಗಡೆ, ಮದ್ದಳೆಯಲ್ಲಿ ನಾಗರಾಜ ಭಂಡಾರಿ ಮತ್ತು ಗಣೇಶ ಭಂಡಾರಿ, ಚಂಡೆಯಲ್ಲಿ ಅಮೃತದೇವ ಮತ್ತು ಮುರೂರು ಸುಬ್ರಹ್ಮಣ್ಯ ಸಹಕರಿಸಿದರು.

ಅಂತೂ ಹಡಿನಬಾಳ ಯಕ್ಷಪರ್ವ ಎಂಬ ಕಾರ್ಯಕ್ರಮದಲ್ಲಿ, ಆಟ ಹಾಗೂ ಸಭಾ ಕಾರ್ಯಕ್ರಮ ಎರಡು ಸಮಯೋಚಿತವಾಗಿ ಮೂಡಿ ಬಂದ ಕಾರಣ ಇದೊಂದು ಉತ್ತಮ ಪ್ರಯೋಗವಾಗಿ ಹೊಮ್ಮಿ ಬಂದಿತು.

Friday, September 25, 2009

ಯಕ್ಷಗಾನದಲ್ಲಿ ಇಂಗ್ಲೀಷ್

ಯಕ್ಷಗಾನ ಮಾತುಗಾರಿಕೆಯಲ್ಲಿ ಇಂಗ್ಲೀಷ್ ಪದಗಳು ಬರಬಾರದು. ಹಾಗೊಮ್ಮೆ ಅಪ್ಪಿ ತಪ್ಪಿ ಒಂದು ಶಬ್ದ ಬಂದರೂ ಸಾಕು ಕಲಾವಿದರು ನಗೆಪಾಟಲಿಗೆ ಗುರಿಯಾಗುತ್ತಾರೆ. ಇನ್ನು ಪ್ರಸಿದ್ಧ ಕಲಾವಿದರಾದರೆ ಮುಗಿದೇ ಹೋಯಿತು ಬೆಳಿಗ್ಗೆ ಚೌಕಿಯಲ್ಲಿ ಹಲವಾರು ಜನರಿಂದ ಉಪದೇಶ ಕೇಳಬೇಕಾದಂತ ಪರಿಸ್ಥಿತಿ. ಹೀಗಿದ್ದು ಕೂಡಾ ಒಂದು ಇಂಗ್ಲೀಷ್ ಶಬ್ದ ನುಡಿದು ಕೊನೆಗೆ ಅದೇ ಸರಿಯೆಂದು ಸಮರ್ಥಿಸಿಕೊಂಡ ಪ್ರಸಂಗವನ್ನು ಈವರೆಗೆ ನಾನೊಮ್ಮೆ ಮಾತ್ರ ನೋಡಿದ್ದೇನೆ.

ಪ್ರಸಂಗದಲ್ಲಿ ಎರಡು ಪಾತ್ರಗಳು ಸಂಭಾಷಿಸುತ್ತಿದ್ದವು. ಇಬ್ಬರೂ ಮಾತಿನ ಮಲ್ಲರೆ. ಸಂಭಾಷಣೆ ನಡುವೆ ೧ ನೇ ಪಾತ್ರಧಾರಿ ಆಕಸ್ಮಿಕವಾಗಿ ಸರಿ ಎನ್ನುವದರ ಬದಲು ’ಕರೆಕ್ಟ್’(correct) ಎಂದರು. ಎದುರಿನ ೨ ನೇ ಪಾತ್ರಧಾರಿ ತಕ್ಷಣ ಆಂ !!!! ಎಂದಾಗ ಒಮ್ಮೆ ಸಭೆ ( ನನ್ನನ್ನೂ ಸೇರಿ) ಗೊಳ್ಳೆಂದಿತು. ಆದರೆ ಇದರಿಂದ ಸ್ವಲ್ಪವೂ ವಿಚಲಿತರಾಗದ ೧ ನೇ ಪಾತ್ರಧಾರಿಯು "ನಾನು ಹೇಳಿದ್ದು ’ಕರೆ’ ಎಂಬುದಾಗಿ, ಇದಕ್ಕೆ ಸರಿ ಎಂಬ ಅರ್ಥವಿದೆ. ಕಡೆಯ ’ಕ್ಟ್’ಎಂಬುದು ಅರ್ಧಾಕ್ಷರವಾದ್ದರಿಂದ ಅದು ಶೂನ್ಯಾಕ್ಷರವಾಗುತ್ತದೆ. ಆ ಶೂನ್ಯಾಕ್ಷರವನ್ನು ನಿರ್ಲಕ್ಷಿಸಬಹುದೆಂದು ವ್ಯಾಕರಣ ಹೇಳುತ್ತದೆ. ಆದ್ದರಿಂದ ನಾನು ಹೇಳಿದ ಪದದಲ್ಲಿ ಯಾವುದೇ ತಪ್ಪಿಲ್ಲ" ಎಂದಾಗ ಹಾಗೂ ಆ ಸಮರ್ಥನೆಗೆ ೨ ನೇ ಪಾತ್ರಧಾರಿಯು ’ನೀ ಜಾಣನಹುದಹುದು’ ಎಂದಾಗ ಇಡೀ ಸಭೆ ಕರತಾಡನ ಮಾಡಿತು.

ಪೆರ್ಡೂರು ಮೇಳದ ಆಟ, ನಗರದಲ್ಲಿ ( ಬಹುಷಃ 1993-94)
೧ ನೇ ಪಾತ್ರಧಾರಿ : ದಿವಂಗತ ನಗರ ಜಗನ್ನಾಥ ಶೆಟ್ಟಿ
೨ ನೇ ಪಾತ್ರಧಾರಿ : ರಮೇಶ ಭಂಡಾರಿ, ಮುರೂರು.

Tuesday, July 28, 2009

ಹಡಿನಬಾಳ ಯಕ್ಷಪರ್ವ - ನಾ ಕಂಡಂತೆ

ಕಳೆದ ಜುಲಾಯಿ ೫ ರಂದು ನಡೆದ ಈ ಕಾರ್ಯಕ್ರಮದ ರೂಪುರೇಶೆ ಆರಂಭವಾದದ್ದು ಬೇಸಿಗೆಯ ಶುರುವಿನಲ್ಲಿ.

ಬಡಗುತಿಟ್ಟಿನ ಆರ್ಥಿಕವಾಗಿ ದುರ್ಬಲವಾದ ಕಲಾವಿದರನ್ನು ಲಕ್ಷ ರೂಪಾಯಿಗಳೊಂದಿಗೆ ಸನ್ಮಾನಿಸುವ ಬೆಂಗಳೂರಿನ ’ಯಕ್ಷಗಾನ ಯೋಗಕ್ಷೇಮ ಅಭಿಯಾನ’ವು ಈ ವರ್ಷ ಆಯ್ದುಕೊಂಡಿದ್ದು ಪ್ರಸಿದ್ದ ಎರಡನೇ ವೇಷಧಾರಿಯಾದ ಹಡಿನಬಾಳ ಶ್ರೀಪಾದ ಹೆಗಡೆಯವನ್ನು. ಶ್ರೀ ವಿ.ಆರ್.ಹೆಗಡೆ ಯವರ ಈ ಆಯ್ಕೆಗೆ ಕಳೆದ ಸಾಲಿನಂತೆ ಯಾರಿಂದಲೂ ವಿರೋಧ ಉಂಟಾಗಲಿಲ್ಲ. ಸನ್ಮಾನಕ್ಕೆ ಯೋಗ್ಯರಾಗಿದ್ದ, ಕಡುಬಡತನದಲ್ಲೂ ಸ್ವಾಭಿಮಾನ ಜೀವನ ನಡೆಸುವ ಶ್ರೀಪಾದ ಹೆಗಡೆಯವರ ಬಗ್ಗೆ ಎಲ್ಲರಿಗೂ ಅಭಿಮಾನವಿತ್ತು ಹಾಗೆ ಅನುಕಂಪವೂ ಕೂಡಾ ಇತ್ತು. ಪ್ರಸಂಗ ಕನಕಾಂಗಿ ಕಲ್ಯಾಣ ಮಾಡಿ ಅಂತ ಒಬ್ಬರಿಂದ ಸಲಹೆ ಬಂದು ಅದೇ ಊರ್ಜಿತವಾಯಿತು. ಜುಲಾಯಿ ೫ ಕ್ಕೆ ಎ.ಡಿ.ಎ ರಂಗಮಂದಿರದಲ್ಲಿ ನಡೆಸುವ ತೀರ್ಮಾನವಾಯಿತು.

ಮೊದಲು ಮಾತಾಡಿದ್ದು ಸಂಘಟಕರೇ ಕಲಾವಿದರನ್ನು ಆಯ್ಕೆ ಮಾಡಬೇಕು ಹಾಗೂ ಚಿಟ್ಟಾಣಿಯವರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು. ಮಾತಿನಂತೆ ಸಂಘಟಕರಾದ ಮನೋಜ ಭಟ್ಟರು, ಸುರೇಶ ಹೆಗಡೆಯವರು ಪಾತ್ರಗಳ ಆಯ್ಕೆ ಮಾಡುವ ಹೊಣೆಗಾರಿಕೆಯನ್ನು ಹೊತ್ತರು. ಸುರೇಶ ಹೆಗಡೆಯವರು ’ಅಭಿಮನ್ಯು’ವಿನ ಪಾತ್ರವನ್ನು ಬುಕ್ ಮಾಡಿದರೆ ಬೇರೆ ಪಾತ್ರಗಳಿಗೆ ಚಿಟ್ಟಾಣಿ, ಹೊಳ್ಳ, ಯಲಗುಪ್ಪ,ಶ್ರೀಧರ ಕಾಸರಕೋಡ್,ಸುಬ್ರಹ್ಮಣ್ಯ ಚಿಟ್ಟಾಣಿ, ಅರ್ಪಿತಾ ಹೆಗಡೆ ಮೊದಲಾದವರೆಲ್ಲ ಆಯ್ಕೆಯಾದರು

ಬೆಂಗಳೂರಿನ ಸೂಪರ್ ಹಿಟ್ ಭಾಗವತರಾದ ಕೊಳಗಿ ಕೇಶವ ಹೆಗಡೆ ಹಾಗೂ ಸರ್ವೇಶ್ವರ ಹೆಗಡೆ ಮುರೂರು ಆಯ್ಕೆಯಾದರೆ ಮದ್ದಲೆವಾದನಕ್ಕೆ ಶಂಕರ ಭಾಗವತರು ಎಂದು ಆಯ್ಕೆ ಮಾಡಿದರು ಚಂಡೆವಾದನಕ್ಕೆ ಅಮೃತದೇವ (ಅಂದರೆ ನಾನು)ನನ್ನು ಒಪ್ಪಿಸಲಾಯಿತು.

ಇನ್ನೇನು ಆಟಕ್ಕೆ ೪-೫ ದಿವಸ ಇದ್ದಾಗ ಶ್ರೀಪಾದ ಹೆಗಡೆಯವರು ಸಧ್ಯ ಬೆಂಗಳೂರಿನಲ್ಲೇ ಇರುವ ಕಣ್ಣೀಮನೆ ಗಣಪತಿ ಯವರು ಅಭಿಮನ್ಯುವಿನ ದ್ವಿತೀಯಾರ್ಧ ಪಾತ್ರ ಮಾಡಲಿ ಎಂದಾಗ ಸುರೇಶ ಹೆಗಡೆಯವರಿಂದ ತೀವ್ರ ವಿರೋಧ ವ್ಯಕ್ತವಾಗಿ ಮಾತುಕಥೆಗಳು ವಿಕೋಪಕ್ಕೆ ತಿರುಗಿ ಅಂತೂ ಕೊನೆಗೆ ಶ್ರೀಪಾದ ಹೆಗಡೆಯವರು ಮುಖಭಂಗಕ್ಕೊಳಗಾಗ ಬೇಕಾಯಿತು. ಆಮೇಲೆ ಚಂಡೆವಾದನಕ್ಕೆ ಅವರು (ಶ್ರೀಪಾದ ಹೆಗಡೆಯವರು )ಮೊದಲೇ ಮತ್ತೊಬ್ಬರಿಗೆ ಹೇಳಿರುವ ವಿಷಯ ಗೊತ್ತಾದರೂ ನಾನು ಅದಕ್ಕೆ ವಿರೋಧಿಸಲಿಲ್ಲ. ನನ್ನ ಅತೀ ಆತ್ಮೀಯರಲ್ಲಿ ಒಬ್ಬನಾದ ಕೆರೋಡಿ ಸುಬ್ಬಣ್ಣ ಅವತ್ತು ನನ್ನೊಂದಿಗೆ ಚಂಡೆವಾದನಕ್ಕೆ ಆಯ್ಕೆಯಾದರು. ಈ ಮಧ್ಯೆ ಶಂಕರ ಭಾಗವತರು ಆಟಕ್ಕೆ ಕೈಕೊಡುವ ವಿಷಯ ಸ್ಪಷ್ಠವಾದಾಗ ಸಾಲಿಗ್ರಾಮ ಮೇಳದ ನಾಗರಾಜ ಭಂಡಾರಿ, ಮತ್ತು ಬೆಂಗಳೂರಿನ ಉದ್ಯಮಿ ಗಣೇಶ ಭಂಡಾರಿಯವರನ್ನು ಒಪ್ಪಿಸಲಾಯಿತು. ((ಆಟದ ವಿಚಾರ ಮುಂದಿನ ಸಂಚಿಕೆಯಲ್ಲಿ ನಿರೀಕ್ಷಿಸಿ)